Sunday, December 21, 2025
Homeರಾಜಕೀಯಸಿದ್ದರಾಮಯ್ಯ ಬಣದ ಶಾಸಕರು-ಸಚಿವರ ಜೊತೆ ಡಿಸಿಎಂ ಡಿಕೆಶಿ ಸಂಧಾನ ತಂತ್ರ

ಸಿದ್ದರಾಮಯ್ಯ ಬಣದ ಶಾಸಕರು-ಸಚಿವರ ಜೊತೆ ಡಿಸಿಎಂ ಡಿಕೆಶಿ ಸಂಧಾನ ತಂತ್ರ

DCM D.K. Shivakumar's negotiation strategy with Siddaramaiah faction MLAs, ministers

ಬೆಂಗಳೂರು,ಡಿ.21- ಮುಖ್ಯ ಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಭೇಟಿ ಮಾಡುವ ಮೂಲಕ ರಾಜಕೀಯ ಸಂಧಾನ ಮಾರ್ಗಗಳನ್ನು ಅನುಸರಿಸಲಾರಂಭಿಸಿದ್ದಾರೆ.

ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಅಧಿವೇಶನದ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಕೆ.ಜೆ.ಜಾರ್ಜ್‌, ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಗೃಹಸಚಿವ ಡಾ.ಜಿ.ಪರಮೇಶ್ವರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಬಲವಾದ ಪ್ರತಿಪಾದಕರಾಗಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಕೆಲವು ಸಂದರ್ಭಗಳಲ್ಲಿ ನನಗೆ ಯಾವ ಶಾಸಕರ ಬೆಂಬಲವೂ ಬೇಡ. ನನ್ನ ಪರವಾಗಿ ಯಾರೂ ಮಾತನಾಡುವುದು ಬೇಡ ಎಂದು ದಾರ್ಷ್ಟ್ಯದಿಂದ ಹೇಳುತ್ತಿದ್ದರು. ತಮಗೆ ಹೈಕಮಾಂಡ್‌ ದೇವಸ್ಥಾನವಿದ್ದಂತೆ. ಯಾವುದೇ ಅವಕಾಶಗಳು ಸಿಗಬೇಕಾದರೂ ದೇವಸ್ಥಾನದಿಂದಲೇ ಒದಗಿ ಬರಲಿದೆ ಎಂಬುದು ಡಿ.ಕೆ.ಶಿವಕುಮಾರ್‌ ಅವರ ಬಲವಾದ ನಂಬಿಕೆ.
ಹೀಗಾಗಿ ಶಾಸಕರನ್ನು ಲೆಕ್ಕಿಸದೆ ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಆದರೆ ಸಿದ್ದರಾಮಯ್ಯ ಅವರು ಕಾಲಕಾಲಕ್ಕೆ ರೂಪಿಸುವ ಪ್ರತಿ ತಂತ್ರಗಳು ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಗಾದಿಯಿಂದ ಅಂತರದಲ್ಲಿರುವಂತೆ ಮಾಡಿದೆ.

ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ತಮ ಕಾರ್ಯತಂತ್ರಗಳನ್ನು ಬದಲಾಯಿಸಿದ್ದಾರೆ. ಒಂದೆಡೆ ತೆರೆಮರೆಯ ಸಂಘರ್ಷದ ನಡುವೆಯೂ ರಾಜಮಾರ್ಗದಲ್ಲಿ ಸಂಧಾನ ಚಟುವಟಿಕೆಗಳಿಗೆ ಅಣಿಯಾಗಿದ್ದಾರೆ.

ಸಿದ್ದರಾಮಯ್ಯ ಬಣದ ಪ್ರಮುಖರ ಪೈಕಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಮೊಟ್ಟ ಮೊದಲು ಭೇಟಿ ಮಾಡಿ ಬೆಂಬಲ ಯಾಚಿಸಿದರು. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಎರಡು ಬಾರಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ದಿನೇಶ್‌ ಗುಂಡೂರಾವ್‌ ಮತ್ತು ಎಂ.ಬಿ.ಪಾಟೀಲ್‌ ಅವರನ್ನು ಮನೆಗೆ ಕರೆಸಿಕೊಂಡು ಚರ್ಚೆ ಮಾಡಿದರು. ಹೊರಗಡೆ ಕಾರ್ಯಕ್ರಮಗಳಲ್ಲೂ ಸಿಕ್ಕಾಗಲೂ ಸಂಧಾನ ಪ್ರಕ್ರಿಯೆಗಳು ನಡೆದಿದ್ದವು.

ಪರಮೇಶ್ವರ್‌ ಮತ್ತು ಡಿ.ಕೆ.ಶಿವಕುಮಾರ್‌ ಒಂದು ಕಾಲದಲ್ಲಿ ಪರಮಾಪ್ತರಾಗಿದ್ದು ಈವರೆಗೂ ಇಬ್ಬರ ನಡುವೆ ಖಾಸಗಿ ಭೇಟಿ ನಡೆದಿಲ್ಲ. ಬಸವರಾಜ ರಾಯರೆಡ್ಡಿ ದಿನಕ್ಕೊಂದು ರೀತಿ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದರೂ ಡಿ.ಕೆ.ಶಿವಕುಮಾರ್‌ ಅವರನ್ನು ಗಣನೆಗೆ ತೆಗೆದುಕೊಂಡಂತೆ ಕಂಡುಬರುತ್ತಿಲ್ಲ.

ಇದೇ 27ರಂದು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್‌ ನಾಯಕರ ಜೊತೆ ಸಂಧಾನ ಮಾತುಕತೆ ಆಗುವ ಸಾಧ್ಯತೆ ಇದೆ.ಹೈಕಮಾಂಡ್‌ ನಾಯಕರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವಿಬ್ಬರೂ ಬದ್ದರಾಗಿರುತ್ತೇವೆ. ಈ ನಡುವೆ ಬಹಿರಂಗ ಹೇಳಿಕೆ ನೀಡುವುದು, ಬೇರೆ ಚಟುವಟಿಕೆಗಳ ಮೂಲಕ ಗೊಂದಲ ಮೂಡಿಸುವ ಪ್ರಯತ್ನ ಮಾಡಬೇಡಿ. ನಿಮಷ್ಟಕ್ಕೆ ನೀವಿರಿ. ದೆಹಲಿಯಲ್ಲಿನ ಸಭೆಗಳಲ್ಲಿ ಯಾವುದೇ ನಿರ್ಧಾರವಾದರೂ ಅದನ್ನು ನಾವಿಬ್ಬರೇ ಸರಿ ಮಾಡಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಬಣದ ಪ್ರಮುಖರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈವರೆಗೂ ಶಿವಕುಮಾರ್‌ ಅವರು ಭೇಟಿ ಮಾಡಿದ್ದ ಪೈಕಿ ಯಾವ ನಾಯಕರೂ ತಮ ನಿಷ್ಠೆಯನ್ನು ಬದಲಾಯಿಸಿಲ್ಲ. ಸಿದ್ದರಾಮಯ್ಯನವರಿಗೆ ಅಚಲ ಬೆಂಬಲವನ್ನು ಮುಂದುವರೆಸಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿಗಾದಿ ದಿನೇ ದಿನೇ ಸವಾಲನ್ನು ತಂದೊಡ್ಡುತ್ತಿದೆ.

ಶತಾಯಗತಾಯ ಇದೇ ಅವಧಿಯಲ್ಲಿ ಅಧಿಕಾರ ಗಿಟ್ಟಿಸಬೇಕೆಂದು ಪ್ರಯತ್ನಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅನುಸರಿಸುತ್ತಿರುವ ಸಂಧಾನ ಮಾರ್ಗ ಫಲ ನೀಡಲಿದೆಯೇ? ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News