ಬೆಂಗಳೂರು, ಜ.15- ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಚರ್ಚೆ ನಡೆಸಲು ದೆಹಲಿಗೆ ಬರುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಹ್ವಾನ ನೀಡಿದ ಬೆನ್ನಲ್ಲೆ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ನಾಯಕರ ನಡುವೆ ತ್ರಿಕೋಣ ಬಿಂದುವಾಗಿ ಸಂದೇಶ ವಾಹಕರಂತೆ ಕೆಲಸ ಮಾಡುತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಇಂದು ಸಂಕ್ರಾಂತಿ ಹಬ್ಬದ ದಿನವು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಆಗಮಿಸುತ್ತಿದ್ದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಆಗಮಿಸಿದ್ದರು. ಮೂವರು ನಾಯಕರು ಸುದೀರ್ಘ ಕಾಲ ಮಹತ್ವದ ಮಾತುಕತೆ ನಡೆಸಿದ್ದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿಯವರು ಅಧಿಕಾರ ಹಂಚಿಕೆಯ ಗೊಂದಲವನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿದ್ದರು. ವಿಮಾನ ನಿಲ್ದಾಣದ ರನ್ ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಆಹ್ವಾನ ನೀಡಿದ್ದರು.
ರಾಹುಲ್ ಗಾಂಧಿಯವರ ಆಹ್ವಾನ ದೊರೆಯುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಉತ್ಸಾಹದಲ್ಲಿ ಸಂಕ್ರಾಂತಿ ಹಬ್ಬದ ನಡುವೆಯೇ ದೆಹಲಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶಿ ಪ್ರವಾಸಕ್ಕಾಗಿ ದೆಹಲಿಗೆ ತೆರಳುತ್ತಿದ್ದು, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ತಮ ಗೊಂದಲವನ್ನು ಬಗೆ ಹರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಕಾತುರರಾಗಿದ್ದಾರೆ.
ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳುವುದು ಕ್ಷೀಣವಾಗಿದೆ. ಏಕಾಂಗಿಯಾಗಿ ದೆಹಲಿಗೆ ತೆರಳುತ್ತಿರುವ ಡಿ.ಕೆ. ಶಿವಕುಮಾರ್ ಅವರು, ನಾಯಕತ್ವದ ವಿಚಾರವಾಗಿ ತಮ ನಿಲುವನ್ನು ಸ್ಪಷ್ಟವಾಗಿ ಹೈಕಮಾಂಡ್ ಮುಂದೆ ಮಂಡಿಸಲು ತಯಾರಿ ನಡೆದಿದ್ದಾರೆ.
ಸಂದೇಶ ವಾಹಕರಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ ಖರ್ಗೆ, ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಅವರ ಸಂದೇಶಗಳನ್ನು ತಲುಪಿಸಿದ್ದಾರೆ ಎನ್ನಲಾಗಿದೆ.
ಅಸ್ಸಾಂ, ಪಶ್ಚಿಮಬಂಗಾಳ, ಕೇರಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ನಾಳೆ ದೆಹಲಿಯಲ್ಲಿ ಕಾಂಗ್ರೆಸ್ಸಿನ ಉಸ್ತುವಾರಿ ನಾಯಕರಗಳ ಮಹತ್ವದ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾಗಿರುವ ಡಿ.ಕೆ.ಶಿವಕುಮಾರ್, ಸಂಸದ ಪ್ರಿಯಾಂಕ ಗಾಂಧಿ ಅವರ ಜೊತೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಸಚಿವ ಕೆ.ಜೆ.ಚಾರ್ಜ್ ಕೇರಳಕ್ಕೆ, ಬಿ.ಕೆ.ಹರಿಪ್ರಸಾದ್ ಪಶ್ಚಿಮ ಬಂಗಾಳಕ್ಕೆ ಉಸ್ತುವಾರಿ ನಾಯಕನಾಗಿದ್ದಾರೆ.
ಸದರಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಡಿ.ಕೆ.ಶಿವಕುಮಾರ್ ಇದೇ ವೇಳೆಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬೇಕು ಪ್ರಯತ್ನಿಸುತ್ತಿದ್ದಾರೆ. ಈ ಮೊದಲು ಡಿ.ಕೆ.ಶಿವಕುಮಾರ್ ಅವರಿಗೆ ಸಮಯ ನೀಡದೆ ಸತಾಯಿಸಿದ್ದ ರಾಹುಲ್ ಗಾಂಧಿ, ಮೈಸೂರಿಗೆ ಬಂದಾಗ ದೆಹಲಿಗೆ ಬನ್ನಿ ಎಂದು ಆಹ್ವಾನ ನೀಡಿ ಹೋಗಿದ್ದಾರೆ.
ಈ ಬಾರಿ ಭೇಟಿಗೆ ಸಮಯ ನೀಡದಿರಲು ಕಷ್ಟಸಾಧ್ಯವಾಗಲಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್ ಭೇಟಿಯಾಗಿ ನಾಯಕತ್ವದ ವಿಷಯ ಕುರಿತು ಸ್ಪಷ್ಟ ನಿಲುವು ತಿಳಿಸುವಂತೆ ಪಟ್ಟು ಹಿಡಿದರೆ ಮುಜಗರಕ್ಕೆ ಒಳಗಾಗಬೇಕಾಗುತ್ತದೆ. ಅದಕ್ಕಾಗಿ ಸದ್ಯಕ್ಕೆ ರಾಹುಲ್ ಗಾಂಧಿ ಭೇಟಿ ಮಾಡದಿರುವಂತೆ ಪ್ರಿಯಾಂಕ ಖರ್ಗೆ, ಉಪಮುಖ್ಯಮಂತ್ರಿಯವರ ಮನವೋಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಧಿಕಾರ ಹಂಚಿಕೆಯ ಚರ್ಚೆಗಳು ಬೇಡ. ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕ ಈ ಬಗ್ಗೆ ಮಾತನಾಡಲು ಸಾಕಷ್ಟು ಅವಕಾಶಗಳಿವೆ ಎಂದು ಹೈಕಮಾಂಡ್ ನಾಯಕರು ರವಾನಿಸಿರುವ ಸಂದೇಶವನ್ನು ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿಸಲಾಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಕೂಡ ತಮ ಕಡೆಯಿಂದ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದು, ನಾಯಕತ್ವ ಬದಲಾವಣೆ ಸಂಬಂಧಪಟ್ಟಂತೆ ವರಿಷ್ಠರ ನಿಲುವೇನು ? ಬದಲಾವಣೆಗೆ ಸಹಮತ ಇದೆಯೇ ? ಇದಿದ್ದೆ ನಿಜವಾದರೆ ಯಾವ ಕಾಲಮಿತಿಯಲ್ಲಿ ಅದು ಜಾರಿಗೆ ಬರಲಿದೆ ಎಂಬ ಬಗ್ಗೆ ಸ್ಪಷ್ಟತೆ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
