Wednesday, January 14, 2026
Homeರಾಜಕೀಯರಾಹುಲ್‌ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆಶಿ ಮಾಡಿದ ಪೋಸ್ಟ್‌ ಭಾರಿ ವೈರಲ್‌

ರಾಹುಲ್‌ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆಶಿ ಮಾಡಿದ ಪೋಸ್ಟ್‌ ಭಾರಿ ವೈರಲ್‌

DK Shivakumar's post after meeting Rahul Gandhi goes viral

ಬೆಂಗಳೂರು, ಜ.14- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ಬಂದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ತಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಭಾರಿ ವೈರಲ್‌ ಆಗಿದೆ.

ರಾಜಕೀಯವಾಗಿ ಯಾವತ್ತೂ ನೇರವಾಗಿ ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ, ಪರೋಕ್ಷವಾಗಿ ಕಾರ್ಯತಂತ್ರ ರೂಪಿಸುವ ಡಿ.ಕೆ.ಶಿವಕುಮಾರ್‌ ಅಧಿಕಾರ ಹಂಚಿಕೆಯ ವಿಚಾರವಾಗಿ ಅಳೆದು-ತೂಗಿ ಮಾತುಗಳನ್ನಾಡುತ್ತಿದ್ದಾರೆ. ಆಗೊಮೆ-ಈಗೊಮೆ ಹಳಿ ತಪ್ಪಿದ್ದನ್ನು ಹೊರತು ಪಡಿಸಿದರೆ ಬಹುತೇಕ ಸಂಯಮ ಕಾಯ್ದುಕೊಂಡಿದ್ದಾರೆ.

ಪ್ರತಿ ಹೇಳಿಕೆ ಮತ್ತು ಹೆಜ್ಜೆಯಲ್ಲೂ ಅತ್ಯಂತ ಜಾಗರೂಕತೆಯಿಂದಲೇ ವರ್ತಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕೆಲಸ ಶಾಸಕರು, ದೆಹಲಿಗೆ ಹೋಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಒತ್ತಡ ಏರಿದ್ದರು. ಇತ್ತ ರಾಜ್ಯದಲ್ಲೂ ಕೆಲವರು ತಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಆಪ್ತ ಬಳಗ ಪ್ರತಿ ತಂತ್ರಗಾರಿಕೆಗಳನ್ನು ರೂಪಿಸಿತ್ತು.

ಎಲ್ಲದರ ನಡುವೆ ರಾಹುಲ್‌ ಗಾಂಧಿ, ಡಿ.ಕೆ.ಶಿವಕುಮಾರ್‌ ಅವರ ಭೇಟಿಗೆ ಸಮಯವನ್ನೇ ನೀಡಿರಲಿಲ್ಲ. ಕಳೆದ ತಿಂಗಳು ಮೂರು ನಾಲ್ಕು ಬಾರಿ ದೆಹಲಿಗೆ ಹೋಗಿದ್ದರು, ರಾಹುಲ್‌ ಗಾಂಧಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಬರಿ ಕೈಯಲ್ಲಿ ವಾಪಸ್‌‍ ಬಂದಿದ್ದರು. ಸಿದ್ದರಾಮಯ್ಯ ಅವರಿಗೆ ಸುಲಭವಾಗಿ ಭೇಟಿಯಾಗಲು ಲಭ್ಯವಾಗುತ್ತಿದ್ದ ರಾಹುಲ್‌ ಗಾಂಧಿ, ಡಿ.ಕೆ.ಶಿವಕುಮಾರ್‌ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು.

ತಮಿಳುನಾಡಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಾರ್ಗ ಮಧ್ಯೆ ನಿನ್ನೆ ರಾಹುಲ್‌ ಗಾಂಧಿ ಮೈಸೂರಿಗೆ ಆಗಮಿಸಿದ್ದರು. ಅವರನ್ನು ಸ್ವಾಗತಿಸುವ ನೆಪದಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಭೇಟಿಯಾಗಿದ್ದರು. ರಾಹುಲ್‌ ಗಾಂಧಿ ತಮಿಳುನಾಡಿನಿಂದ ವಾಪಸ್‌‍ ಬಂದು ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಮತ್ತೆ ಅದೇ ವಿಮಾನ ನಿಲ್ದಾಣದ ಒಳಗೆ ಇಬ್ಬರು ನಾಯಕರು ರಾಹುಲ್‌ ಗಾಂಧಿಯನ್ನು ಭೇಟಿ ಮಾತುಕತೆ ನಡೆಸಿದ್ದಾರೆ.

ಬಳಿಕ ಡಿ.ಕೆ.ಶಿವಕುಮಾರ್‌ ಪ್ರತ್ಯೇಕವಾಗಿ ರಾಹುಲ್‌ ಗಾಂಧಿಯವರ ಜೊತೆ ಚರ್ಚೆ ನಡೆಸಿದ್ದಾರೆ. ಇಬ್ಬರ ನಡುವೆ ಕೆಲ ಕಾಲ ರಹಸ್ಯ ಮಾತುಕತೆ ನಡೆದಿದೆ. ಡಿ.ಕೆ.ಶಿವಕುಮಾರ್‌ ಹೇಳಿದ್ದನ್ನು ಕೇಳಿಸಿಕೊಂಡಿರುವ ರಾಹುಲ್‌ ಗಾಂಧಿ ಯಾವುದೇ ನಿರ್ಧಾರಕ್ಕೂ ಬರದೆ ಕೇವಲ ಔಪಚಾರಿಕವಾಗಿ ಕೈ ಕುಲುಕಿ ತಾವೇ ಮುಂದಾಗಿ ಅಲ್ಲಿಂದ ಹೊರಡಲು ಅನುವಾಗಿದ್ದಾರೆ. ಹೇಳಿದ್ದನ್ನೆಲ್ಲಾ ಹೇಳಿ ಆಗಿದೆ. ಇದರ ಮೇಲೆ ನಿಮ ಇಷ್ಟ ಎಂಬಂತೆ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಹೋಗುವುದನ್ನೇ ನೋಡುತ್ತಾ ತಲೆ ಆಡಿಸಿ, ಕೈ ಮುಗಿದಿದ್ದಾರೆ. ಡಿ.ಕೆ.ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿಯವರ ಪ್ರತ್ಯೇಕ ಮಾತುಕತೆ ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿತ್ತು. ಸಂಕ್ರಾಂತಿಯ ಬಳಿಕ ಮಹತ್ವದ ಬೆಳವಣಿಗೆಗಳಾಗಬಹುದು ಎಂಬ ಲೆಕ್ಕಾಚಾರಗಳಿಗೆ ಇಂಬು ನೀಡಿತ್ತು.

ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್‌ ತಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ ಮಾಡಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ದಪ್ಪ ಅಕ್ಷರಗಳಲ್ಲಿ ನಮೂದಿಸಿದ್ದಾರೆ. ಅದರ ಕೆಳಗೆ ಸಣ್ಣ ಅಕ್ಷರಗಳಲ್ಲಿ ಕಂಡು ಕಾಣದಂತೆ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಮಾತನಾಡಿರುವುದು ಎಂದು ಬರೆಯಲಾಗಿದೆ.

ಉದ್ಯಮಿ ಒಕ್ಕಲಿಗ ಕಾರ್ಯಕ್ರಮ ಮುಗಿದು ಎರಡು ದಿನಗಳಾಗಿದೆ. ಅದೇ ದಿನ ಸಂಜೆ ಕುಣಿಗಲ್‌ ಉತ್ಸವದಲ್ಲಿ ಭಾಗವಹಿಸಿದ್ದಾರೆ. ನಿನ್ನೆ ಅರೆಮನೆ ಮೈದಾನದ ಆವರಣದಲ್ಲಿ ಕಾಂಗ್ರೆಸ್‌‍ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಮಾತನಾಡಿದ್ದಾರೆ. ಬೇರೆಬೇರೆ ಕಾರ್ಯಕ್ರಮಗಳಲ್ಲಿ ಆಡಿರುವ ಯಾವ ಮಾತುಗಳನ್ನು ಸರಿಸಿಕೊಳ್ಳದ ಡಿ.ಕೆ.ಶಿವಕುಮಾರ್‌, ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ಫಲ ನೀಡುತ್ತದೆ ಎಂದಿರುವುದು ಭಾರೀ ಕುತೂಲಹ ಕೆರಳಿಸಿದೆ. ರಾಹುಲ್‌ ಗಾಂಧಿಯವರ ಜೊತೆ ನಡೆದ ಸಂಭಾಷಣೆ ಫಲ ನೀಡಿಲ್ಲ. ಇನ್ನೂ ಮುಂದೆ ಪ್ರಾರ್ಥನೆಯೇ ಫಲ ನೀಡಬೇಕು ಎಂಬ ಅರ್ಥವೇ ? ಅಥವಾ ಈವರೆಗಿನ ಪ್ರಾರ್ಥನೆ ಫಲ ನೀಡಿದೆ, ರಾಹುಲ್‌ ಗಾಂಧಿ ತಮಗೆ ಬೆಂಬಲ ನೀಡಲು ಒಪ್ಪಿದ್ದಾರೆ ಎಂಬ ಅರ್ಥವೇ ಎಂಬುದನ್ನು ತಿಳಿಯದೇ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.

ಎರಡು ದಿನಗಳ ಹಿಂದಿನ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಯನ್ನು ಪೋಸ್ಟ್‌ ಮಾಡುವ ಮೂಲಕ ಡಿ.ಕೆ.ಶಿವಕುಮಾರ್‌, ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಎಂದು ಬರೆದು ಸೇಫ್‌ ಗೇಮ್‌ ತಂತ್ರಗಾರಿಕೆ ಬಳಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಕುರ್ಚಿ ಕಿತ್ತುಕೊಳ್ಳದೆ ಬಿಡುವುದಿಲ್ಲ ಎಂಬಂತೆ ತಂತ್ರಗಾರಿಕೆಯ ರಾಜಕಾರಣ ಮಾಡುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರು ತಾವು ರಾಹುಲ್‌ ಗಾಂಧಿ ಹೇಳಿದಂತೆ ಕೇಳುವುದಾಗಿ ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಭೇಟಿಗೆ ಸಮಯ ನೀಡದಿದ್ದ ರಾಹುಲ್‌ ಗಾಂಧಿಯನ್ನು ನಿನ್ನೆ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಮಾತನಾಡುವ ಮೂಲಕ ಡಿ.ಕೆ. ಶಿವಕುಮಾರ್‌ ಒಂದು ಹಂತದ ಯಶಸ್ಸು ಗಳಿಸಿದ್ದಾರೆ.

ಮಾತುಕತೆಯ ಫಲ ಶ್ರುತಿ ಏನು ಎಂದು ಅಧಿಕೃತವಾಗಿ ತಿಳಿದುಬಂದಿಲ್ಲ. ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಒತ್ತಡಕ್ಕೆ ರಾಹುಲ್‌ ಗಾಂಧಿ ಮಣಿದಿದ್ದಾರೆಯೇ, ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ, ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಬಿಡಿಸಿಕೊಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಹಿರಂಗವಾಗಿ ಏನನ್ನು ಮಾತನಾಡದೇ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ ಹಾಕುವ ಮೂಲಕ ಡಿ.ಕೆ.ಶಿವಕುಮಾರ್‌ ತಮ ಹಿತೈಷಿಗಳಿಗೆ ಮತ್ತು ಎದುರಾಳಿಗಳಿಗೆ ಸ್ಪಷ್ಟ ಸಂದೇಶ ನೀಡಿದಂತಿದೆ.

RELATED ARTICLES

Latest News