ಬೆಳಗಾವಿ, ಡಿ.12- ಇಲ್ಲಿನ ಖಾಸಗಿ ಫಾರ್ಮ್ ಹೌಸ್ ನಲ್ಲಿ ನಿನ್ನೆ ರಾತ್ರಿ ನಡೆದ ಔತಣಕೂಟದಲ್ಲಿ ಸುಮಾರು 70 ರಿಂದ 75 ಮಂದಿ ಶಾಸಕರು ಮತ್ತು ಸಚಿವರು ಭಾಗವಹಿಸಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಲ್ಲಿನ ರಾಜಕೀಯ ಬೆಳವಣಿಗೆಗಳಿಗೆ ಬಿಜೆಪಿಯ ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಸ್ಪೋಟಕ ತಿರುವು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಮೊನ್ನೆ ಬೆಳಗಾವಿಯ ಶಾಸಕರೊಬ್ಬರು ಔತಣಕೂಟ ಆಯೋಜಿಸಿದ್ದರು. ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರು ಅದರಿಂದ ದೂರ ಉಳಿದಿದ್ದರು.
ನಿನ್ನೆ ರಾತ್ರಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ದೊಡ್ಡಣ್ಣನವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಕ್ಕಾಗಿಯೇ ಔತಣಕೂಟ ಆಯೋಜಿಸಿದ್ದರು. ಅದರಲ್ಲಿ ಸುಮಾರು 45 ಮಂದಿ ಶಾಸಕರು ಭಾಗವಹಿಸಿದ್ದರು ಎಂದು ಹೇಳಲಾಗಿತ್ತು. ಆದರೆ 75 ಹೆಚ್ಚು ಮಂದಿ ಶಾಸಕರು ಭಾಗವಹಿಸಿದ್ದರು ಎಂದು ಎಸ್.ಟಿ.ಸೋಮಶೇಖರ್ ಹೇಳುವ ಮೂಲಕ ಆಚ್ಚರಿ ಮೂಡಿಸಿದ್ದಾರೆ.
ಎಸ್.ಟಿ.ಸೋಮಶೇಖರ್ ಮೂಲ ಕಾಂಗ್ರೆಸ್ ನವರಾಗಿದ್ದರೂ, ಆಪರೇಷನ್ ಕಮಲದ ವೇಳೆ ಬಿಜೆಪಿ ಸೇರಿದ್ದರು. ಅಲ್ಲಿ ಸಚಿವರಾಗಿದ್ದರು, 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಯಶವಂತಪುರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಆ ಬಳಿಕ ಕಾಂಗ್ರೆಸ್ ಪಾಳೇಯದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತಾವು ಈಗ ಬಿಜೆಪಿ ಅಥವಾ ಕಾಂಗ್ರೆಸ್ ಶಾಸಕರಲ್ಲ. ಯಾವ ಪಕ್ಷದ ಶಾಸಕಾಂಗ ಸಭೆಗಳಲ್ಲೂ ಭಾಗವಹಿಸುವುದಿಲ್ಲ. ಸ್ವತಂತ್ರವಾಗಿದ್ದೇನೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಔತಣಕೂಟದ ಬಗ್ಗೆ ಮಾತನಾಡಿದ ಅವರು, ನಾನು ಮತ್ತು ಮತ್ತೊಬ್ಬ ಉಚ್ಛಾಟಿತ ಶಾಸಕ ಶಿವರಾಂ ಹೆಬ್ಬಾರ್ ಊಟದ ಸಭೆಯಲ್ಲಿ ಭಾಗವಹಿಸಿದ್ದೇವು. ಅಲ್ಲಿ ರಾಜಕೀಯ ಚರ್ಚೆಯಾಗಿಲ್ಲ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬ ವಿಚಾರಗಳು ಪ್ರಸ್ತಾಪವಾಗಲಿಲ್ಲ. ಎಲ್ಲರೂ ಒಟ್ಟಾಗಿದ್ದರು ಎಂದಿದ್ದಾರೆ.
ಡಿ.ಕೆ.ಶಿವಕುಮಾರ್‌ಗೆ ಮಾಡಿದ ಕೆಲಸಕ್ಕೆ ಕೂಲಿ ಸಿಕ್ಕೇ ಸಿಗುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ವರಿಷ್ಠರ ತೀರ್ಮಾನಗಳಿಗೆ ವಿರುದ್ಧವಾಗಿ ಮಾತನಾಡುವವರು ಯಾರಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸಿ ಬಸವರಾಜ್ ಬೊಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವಾಗ ಶಾಸಕರ ಸಂಖ್ಯಾಬಲವನ್ನು ಲೆಕ್ಕ ಹಾಕಿರಲಿಲ್ಲ. ಹೈಕಮಾಂಡ್ ಹೇಳಿದ ಮೇಲೆ ಮುಗಿಯಿತು. ಅದರಂತೆ ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಹಿಗೆಯೇ ನಡೆಯುತ್ತದೆ ಎಂದಿದ್ದಾರೆ.
ಕಾಂಗ್ರೆಸ್ಸಿನಲ್ಲಿ ವರಿಷ್ಠರು ಹೇಳಿದಂತೆ ಎಲ್ಲಾ ಶಾಸಕರು ಕೇಳುತ್ತಾರೆ. ಡಿ.ಕೆ.ಶಿವಕುಮಾರ್ ಎಂಟು ಬಾರಿ ಶಾಸಕರಾಗಿದ್ದಾರೆ. ಸಚಿವರಾಗಿ ಹಲವಾರು ಖಾತೆಗಳ ಜವಾಬ್ದಾರಿ ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲು-ರಾತ್ರಿ ರಾಜ್ಯದ ಉದ್ದಗಲಕ್ಕೂ ಸುತ್ತಿದ್ದಾರೆ. ಅವರು ಒಂದು ಬಾರಿ ಏಕೆ ಮುಖ್ಯಮಂತ್ರಿ ಆಗಬಾರದು ಎಂದು ಸೋಮಶೇಖರ್ ಪ್ರಶ್ನಿಸಿದರು.
ಹಣೆಯಲ್ಲಿ ಬರೆದಿದ್ದರೆ ಅವರ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಇಲ್ಲವಾದರೆ ಇಲ್ಲ ನಾನು ಹುಟ್ಟಾ ಕಾಂಗ್ರೆಸಿಗ, ಮೂಲ ಪಕ್ಷದಲ್ಲಿ ಸಚಿವನಾಗಲಿಲ್ಲ. ಬಿಜೆಪಿಯಲ್ಲಿ ಸಚಿವರಾಗಬೇಕು ಎಂದು ಹಣೆಯಲ್ಲಿ ಬರೆದಿತ್ತು. ಅದರಂತೆ ಆದೆ. ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿಯಾಗುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿಯತ್ತ ಡಿ.ಕೆ.ಶಿವಕುಮಾರ್ ಮುಖ ಮಾಡಿದ್ದಾರೆ ಎಂಬುದನ್ನು ಅಲ್ಲಗಳದೆ ಸೋಮಶೇಖರ್, ಕಾಂಗ್ರೆಸ್‌ಕ್ಕಾಗಿ ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಶ್ರಮ ಹಾಕಿದ್ದಾರೆ. ಬಿಜೆಪಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ಸಿಕ್ಕೇ ಸಿಗುತ್ತದೆ. ಕೂಲಿ ಕೊಡುವುದಿಲ್ಲ ಎಂದು ಯಾರಾದರೂ ಏಕೆ ಹೇಳುತ್ತಾರೆ. ಡಿಕೆ ಶಿವಕುಮಾರ್ ಜೊತೆಯಲ್ಲಿ ನೂರಾರು ಕಾರ್ಯಕರ್ತರು ದುಡಿದಿದ್ದಾರೆ ಎಂದು ಹೇಳಿದರು.
ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಮೌನವಾಗಿದೆ ಎಂದು ಭಾವಿಸಬೇಕಿಲ್ಲ ಅಧಿವೇಶನ ನಡೆಯುತ್ತಿದೆ ಎಂದು ಸದ್ಯಕ್ಕೆ ಸುಮನಿರಬಹುದು. ಮುಂದೆ ಇದು ಇತ್ಯರ್ಥವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಸಾಕಷ್ಟು ಸಂಖ್ಯಾ ಬಲ ಇದೆ. ನಮ ಬೆಂಬಲ ಕೇಳುವ ಅಗತ್ಯ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
