Wednesday, December 3, 2025
Homeರಾಜಕೀಯನಾನು ಮತ್ತು ಸಿದ್ದರಾಮಯ್ಯ ಸೋದರರಿದ್ದಂತೆ : ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ನಾನು ಮತ್ತು ಸಿದ್ದರಾಮಯ್ಯ ಸೋದರರಿದ್ದಂತೆ : ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

I and Siddaramaiah are like brothers: D.K. Shivakumar

ಬೆಂಗಳೂರು, ಡಿ.1- ಸಿಎಂ ಸಿದ್ದರಾಮಯ್ಯ ಮತ್ತು ತಾವು ಸಹೋದರರಂತಿದ್ದೇವೆ. ನಮಲ್ಲಿ ಯಾವುದೇ ಗುಂಪುಗಾರಿಕೆಯಾಗಲಿ, ಬಣಗಳಾಗಲಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಕೆಂಗಲ್‌ ಹನುಮಂತಯ್ಯ ನವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ಯಾವುದೇ ಒಡಕ್ಕಿಲ್ಲ. ಮಾಧ್ಯಮಗಳ ಒತ್ತಡಕ್ಕಾಗಿ ನಾವಿಬ್ಬರು ಪರಸ್ಪರ ಉಪಹಾರಕೂಟ ನಡೆಸಿದ್ದೇವೆ. ನಮಗೆ ಇದ್ಯಾವುದು ಅಗತ್ಯ ಇಲ್ಲ. ಡಿ.ಕೆ.ಶಿವಕುಮಾರ್‌ ಆಗಲಿ ಸಿದ್ದರಾಮಯ್ಯ ಅವರದಾಗಲಿ ಯಾವ ಗುಂಪುಗಳು ಇಲ್ಲ. 140 ಮಂದಿ ಶಾಸಕರು ನನ್ನ ಜೊತೆಗಿದ್ದಾರೆ ಎಂದರು.

ಹುಟ್ಟುವಾಗ ಒಬ್ಬರೇ ಸಾಯುವಾಗಲು ಒಬ್ಬರೇ ರಾಜಕೀಯ, ಪಕ್ಷ ಎಂದ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಕೇಂದ್ರದ ವಿರುದ್ಧ ಆಕ್ರೋಶ:
ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿಯವರ ವಿರುದ್ಧ ನ್ಯಾಷನಲ್‌ ಹೆರಾಲ್‌್ಡ ಕುರಿತಂತೆ ಮತ್ತೊಂದು ಪ್ರಕರಣ ದಾಖಲಿಸಿರುವುದು ಅನ್ಯಾಯದ ಪರಮಾವಧಿ. ಕಿರುಕುಳಕ್ಕೂ ಒಂದು ಮಿತಿ ಇದೆ. ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ, ಇದು ಖಂಡನೀಯ. ಇಂತಹ ಕಿರುಕುಳ ಅಗತ್ಯವೇ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಷನಲ್‌ ಹೆರಾಲ್ಡ್ ಸಂಸ್ಥೆಯ ಶೇರುಗಳಿಗೆ ಹಿಂದೆ ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಜವಾಬ್ದಾರರು ಎಂದು ಹೇಳಿದರು.
ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸರ್ಕಾರದ ಸಂಸ್ಥೆಗಳಿಗೆ ಮುಖ್ಯಸ್ಥರಾಗಿದ್ದೇವೆ. ಮುಖ್ಯಮಂತ್ರಿಯವರು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಅಧ್ಯಕ್ಷರಾಗಿದ್ದರೆ, ನಾನು ನೀರಾವರಿ ನಿಗಮಗಳಿಗೆ ಅಧ್ಯಕ್ಷನಾಗಿದ್ದೇನೆ. ನಾವು ಅಧ್ಯಕ್ಷ ಸ್ಥಾನ ಅಧಿಕಾರ ಬಿಟ್ಟು ಹೋಗುವಾಗ, ಅಲ್ಲಿನ ಹೊಣೆಗಾರಿಕೆಗಳೆಲ್ಲವೂ ಎಲ್ಲವೂ ವರ್ಗಾವಣೆಯಾಗಿರುತ್ತದೆ ಎಂದರು.

ಒಂದೆರಡು ಶೇರುಗಳು ನಮ ಹೆಸರುಗಳಲ್ಲಿ ಉಳಿದುಕೊಳ್ಳಬಹುದು. ಪಂಡಿತ್‌ ಜವಹಾರ್‌ ಲಾಲ್‌ ನೆಹರು ಅವರು ನ್ಯಾಷನಲ್‌ ಹೆರಾಲ್‌್ಡ ಪ್ರಕರಣದಲ್ಲಿ ಒಂದಷ್ಟು ಶೇರುಗಳನ್ನು ಉಳಿಸಿಕೊಂಡಿರಬಹುದು, ಅವು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿಯ ಮೂಲಕ ವರ್ಗಾವಣೆಯಾಗಿ ಬಂದಿವೆ. ಎಲ್ಲವೂ ಪಾರದರ್ಶಕವಾಗಿದೆ ಎಂದರು.

ಯಂಗ್‌ ಇಂಡಿಯಾ ಮತ್ತು ನ್ಯಾಷನಲ್‌ ಹೆರಾಲ್‌್ಡ ಸಂಸ್ಥೆಗಳು ಕಾಂಗ್ರೆಸ್‌‍ ಪಕ್ಷದ ಸಂಸ್ಥೆಯ ಆಸ್ತಿ. ನ್ಯಾಷನಲ್‌ ಹೆರಾಲ್ಡ್‌‍ ಗಾಂಧಿ ಕುಟುಂಬದ ಆಸ್ತಿಯಲ್ಲ. ಗಾಂಧಿ ಕುಟುಂಬ ಇಲ್ಲದೆ ಕಾಂಗ್ರೆಸ್‌‍ ಪಕ್ಷ ಇಲ್ಲ. ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದಾಗ ಶೇರುಗಳನ್ನು ಉಳಿಸಿಕೊಂಡಿರಬಹುದು. ಸೀತಾರಾಮ್‌ ಕೇಸರಿ ಅವರ ಬಳಿಕ ಸೋನಿಯಾ ಗಾಂಧಿಯವರು ಕಾಂಗ್ರೆಸ್‌‍ ಪಕ್ಷದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು. ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್‌‍ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷ ಆಡಳಿತ ನಡೆಸಿದೆ ಎಂದರು.

ಕಾಂಗ್ರೆಸ್‌‍ ಪಕ್ಷವನ್ನು ಬೆದರಿಸಲು ರಾಜಕೀಯ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ರಾಹುಲ್‌ ಗಾಂಧಿ ಹೆದುರಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಅಸೂಯೆಯಿಂದ ತೆಗೆದುಕೊಳ್ಳುತ್ತಿರುವ ಕ್ರಮಗಳು ನಗಣ್ಯ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅದನ್ನೆಲ್ಲ ಬಿಟ್ಟು ದ್ವೇಷದ ರಾಜಕಾರಣ ಮಾಡುತ್ತಿರುವುದು ಖಂಡನೀಯ. ಇಂತಹ ಕ್ರಮಗಳಿಂದ ಕಾಂಗ್ರೆಸ್‌‍ ಪಕ್ಷವನ್ನು ಹತ್ತಿಕ್ಕುವುದು ಸುಲಭ ಅಲ್ಲ. ರಾಜಕಾರಣದಲ್ಲಿ ಮುಖಾಮುಖಿಯಾಗಿ ಚುನಾವಣೆಯಲ್ಲಿ ಎದುರಿಸಬೇಕು ಎಂದು ಹೇಳಿದರು.

ಶೀಘ್ರವೇ ಸರ್ವ ಪಕ್ಷ ಸಭೆ: ದೆಹಲಿಯಲ್ಲಿ ನಮ ರಾಜ್ಯದ ಸಂಸದರ ಜೊತೆಗೆ ಸರ್ವಪಕ್ಷ ಸಭೆ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.ಉತ್ತರಪ್ರದೇಶದ ಸಂಸದ ರಾಜೀವ್‌ ರಾಯ್‌ ಬೆಂಗಳೂರಿನ ಸಂಚಾರ ದಟ್ಟಣೆಯ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಸದರಿ ಸಂಸದರನ್ನು ತಾವು ದೆಹಲಿಯಲ್ಲಿ ಭೇಟಿ ಮಾಡಲಿದ್ದು, ಚರ್ಚೆ ನಡೆಸುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರನ್ನು ಪುಣ್ಯಸರಣೆಯ ಕಾರಣಕ್ಕೆ ಸರಿಸಿಕೊಳ್ಳುತ್ತಿದ್ದೇವೆ. ವಿಧಾನಸೌಧವನ್ನು ಕೆಂಗಲ್‌ ಹನುಮಂತಯ್ಯ, ವಿಕಾಸಸೌಧವನ್ನು ಎಸ್‌‍.ಎಂ.ಕೃಷ್ಣ ನಿರ್ಮಿಸಿದರು. ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದ್ದರು. ಅವರ ಎಲ್ಲಾ ಸಾಧನೆಗಳು ಇಂದು ನಮ ಮುಂದೆ ಸಾಕ್ಷಿ ಗುಡ್ಡೆಗಳಾಗಿ ನಿಂತಿವೆ. ಯಾರಿಗೆ ಆಗಲಿ ಅಧಿಕಾರ ಸಿಕ್ಕಾಗ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂದು ಹೇಳಿದರು.

ಆ ಕಾಲದಲ್ಲಿ ಕರ್ನಾಟಕದ ರಾಜಧಾನಿ ರಾಜ್ಯದ ಮಧ್ಯ ಭಾಗ ದಾವಣಗೆರೆಗೆ ಹೋಗಿದ್ದರೆ, ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರು ಹವಾಗುಣ ಆಹ್ಲಾದಕರವಾಗಿದೆ. ವಿಶ್ವದ ಜನರೇ ಇತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.
ಸಮುದ್ರ ದಂಡೆಯಲ್ಲಿರುವ ನಗರಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಹವಾಮಾನ ವೈಪರಿತ್ಯ ಸೇರಿದಂತೆ ಎಲ್ಲಾ ರೀತಿಯಲ್ಲೂ ಸುರಕ್ಷಿತವಾದ ಪವಿತ್ರ ನಗರ ಎಂದು ಹೇಳಿದರು.

RELATED ARTICLES

Latest News