ಬೆಂಗಳೂರು, ಜ.12- ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಅಗತ್ಯವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ತಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕರನ್ನು ದೆಹಲಿಗೆ ಕರೆಸುವ ಬಗ್ಗೆ ಸಕಾರಾತಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ನಾಯಕತ್ವದ ಗೊಂದಲ ಹೈಕಮಾಂಡ್ ಸೃಷ್ಟಿಸಿದ್ದಲ್ಲ, ರಾಜ್ಯ ನಾಯಕರೇ ಗೊಂದಲ ಮಾಡಿಕೊಂಡಿದ್ದಾರೆ. ಅವರೇ ಬಗೆ ಹರಿಸಿಕೊಳ್ಳಲಿ ಎಂದು ಹೇಳಿದ್ದರು. ಅದರಿಂದ ರಾಜ್ಯ ರಾಜಕಾರಣ ದಿಕ್ಕು ಬದಲಾವಣೆಗೊಂಡಿತ್ತು.
ಸುದೀರ್ಘ ಚರ್ಚೆ:
ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ನೀಡಿ, ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು.ಈ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದಿರುವ ಒಪ್ಪಂದದ ಪ್ರಕಾರ ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಬೇಕು ಎಂದು ಡಿ.ಕೆ.ಶಿವಕುಮಾರ್ ಅವರ ಹಕ್ಕೊತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ತಾವು ಅಸಹಾಯಕರಾಗಿದ್ದು ರಾಹುಲ್ ಗಾಂಧಿ ನಿರ್ಧಾರಕ್ಕೆ ವಿರುದ್ಧವಾಗಿ ಮಾತನಾಡಲಾಗುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ತಿಳಿದು ಬಂದಿದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಭೇಟಿಗಾದರೂ ಸಮಯಾವಕಾಶ ಕೊಡಿಸುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಅಸ್ಸಾಂ ವಿಧಾನಸಭೆಯ ಚುನಾವಣೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಉಸ್ತುವಾರಿ ನಾಯಕಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್ ವೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ. ಚುನಾವಣಾ ಸಂಬಂಧಪಟ್ಟ ಚರ್ಚೆಗೆ ಇದೇ ತಿಂಗಳ 16 ಮತ್ತು 22ರಂದು ದೆಹಲಿಯಲ್ಲಿ ಮಹತ್ವದ ಸಭೆಗಳು ನಿಗದಿಯಾಗಿವೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುತ್ತಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿಗೆ ಸಮಯಾವಕಾಶ ದೊರೆಯಲಿದೆ ಎಂದು ಖರ್ಗೆ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ಶತಾಯಗತಾಯ ಅಧಿಕಾರ ಪಡೆಯಲೇಬೇಕು ಎಂದು ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ನೇರವಾಗಿ ತಮ ಹಕ್ಕು ಪ್ರತಿಪಾದಿಸಲು ಮುಂದಾಗಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆಯ ನೆಪದಲ್ಲಿ ಉಸ್ತುವಾರಿಯಾಗಿರುವ ಪ್ರಿಯಾಂಕ ಗಾಂಧಿ ಅವರ ಬಳಿ ಹೆಚ್ಚು ಚರ್ಚೆ ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಹುದ್ದೆ ಪಡೆಯುವ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಂಗಳೂರಿನಲ್ಲಿ ಖರ್ಗೆ ಅವರ ಭೇಟಿಯ ಬಳಿಕ ಒಂದೇ ಕಾರಿನಲ್ಲಿ ವಿಮಾನ ನಿಲ್ದಾಣದವರೆಗೂ ಪ್ರಯಾಣಿಸಿದ್ದಾರೆ. ಈ ವೇಳೆ ರಾಜಕೀಯ ಕುರಿತು ಖರ್ಗೆಯವರೊಂದಿಗೆ ಡಿ.ಕೆ.ಶಿವಕುಮಾರ್ ಮಹತ್ವದ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ರಾಹುಲ್ ಗಾಂಧಿ ಊಟಿಯಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರು ಮೂಲಕ ಪ್ರಯಾಣಿಸುತ್ತಿದ್ದಾರೆ. ಆ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ.
