ಬೆಂಗಳೂರು, ಜ.4- ಬೆಳಗಾವಿ ಜಿಲ್ಲೆಯಲ್ಲಿ ಪದೇ ಪದೇ ಸ್ವಪಕ್ಷೀಯರ ನಡುವೆಯೇ ಸಂಘರ್ಷಮಯ ವಾತಾವರಣ ನಿರ್ಮಾಣವಾಗುವ ಮೂಲಕ ರಾಜ್ಯ ರಾಜಕೀಯದ ಮೇಲೆಯೂ ಪರಿಣಾಮ ಬೀರುವುದು ಕಾಂಗ್ರೆಸ್ ನಲ್ಲಿ ಸಿಡಿಮಿಡಿಯ ವಾತಾವರಣ ನಿರ್ಮಿಸುತ್ತಿದೆ.
ಕೇಂದ್ರೀಯ ವಿದ್ಯಾಲಯ ಮಂಜೂರಾತಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿರುದ್ಧ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ಮತ್ತು ಬಿಜೆಪಿಯ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸುವ ಮೂಲಕ ರಾಜಕೀಯ ಬೇರೆ ತಿರುವು ಪಡೆದುಕೊಳ್ಳುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಿಯಾಂಕಾ ಜಾರಕಿಹೊಳಿಯವರ ಪರವಾಗಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳಿವೆ. ಲಕ್ಷ್ಮಣ ಸವದಿ ಅವರ ಒಳ ಏಟಿಗೆ ಪ್ರತಿಕಾರವಾಗಿ ಜಿಲ್ಲಾ ಸಹಕಾರ ಬ್ಯಾಂಕ್ ನ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬ ಒಟ್ಟಾಗಿ ಬಿಜೆಪಿಯ ಮಾಜಿ ಸಂಸದ ಅಣ್ಣ ಸಾಹೇಬ ಜಲ್ಲೆ ಬೆಂಬಲ ನೀಡಿತ್ತು.
ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ ಸವದಿಗೆ ಸ್ವಪಕ್ಷೀಯರೆ ಹಿನ್ನೆಡೆಯಾಗುವಂತೆ ಮಾಡಿದ್ದರು.
ಈ ಅಸಮಧಾನ ಒಳಗೊಳಗೆ ಕುದಿಯುತ್ತಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಅಥಣಿ ಪಟ್ಟಣಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿ, ಡಿಸೆಂಬರ್ 19 ರಂದು ಆದೇಶ ಹೊರಡಿಸಿದೆ.
ಪ್ರಿಯಾಂಕಾ ಜಾರಕಿಹೊಳಿ ಅವರಿಂದಾಗಿಯೇ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ ಎಂದು ಅಥಣಿ ಪಟ್ಟಣದಾದ್ಯಂತ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ಕೇಂದ್ರೀಯ ವಿದ್ಯಾಲಯ ಮಂಜುರಾತಿಗೆ ಒತ್ತಾಯಿಸಿ ಪ್ರಿಯಾಂಕ್ ಸಂಸತ್ ನಲ್ಲಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ.
ಕೇಂದ್ರೀಯ ವಿದ್ಯಾಲಯ ಮಂಜೂರಾತಿಗೆ ಪ್ರಿಯಾಂಕಾ ಕಾರಣಕರ್ತರು ಎಂದು ಬಿಂಬಿಸುವ ಪೋಸ್ಟರ್ನಲ್ಲಿ ಲಕ್ಷ್ಮಣ ಸವದಿ ಫೋಟೋ ಹಾಕಿಲ್ಲ. ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ ಅವರ ಫೋಟೋಗಳನ್ನು ಮಾತ್ರ ಹಾಕಲಾಗಿದೆ. ಇದು ಸಹಜವಾಗಿಯೇ ಲಕ್ಷ್ಮಣ ಸವದಿ ಹಾಗೂ ಬಿಜೆಪಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೋಲ್ಲೆ ಅವರನ್ನು ಕೆರಳಿಸಿದೆ.
ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಕುರಿತು ಕ್ರೆಡಿಟ್ ವಾರ್ ಆಡಳಿತ ಪಕ್ಷದ ಪ್ರಮುಖ ನಾಯಕರ ನಡುವೆ ಜೋರಾಗಿದೆ. ಲಕ್ಷ್ಮಣ ಸೌದಿ ಅವರು ಈ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನವರನ್ನು ತಾವು ಭೇಟಿ ಮಾಡಿ ಕೇಂದ್ರೀಯ ವಿದ್ಯಾಲಯ ಮಂಜೂರಾತಿಗೆ ಮನವಿ ಮಾಡಿಕೊಂಡಿದ್ದನ್ನು ಸರಿಸಿಕೊಂಡಿದ್ದಾರೆ. ಕೇಂದ್ರ ಸಚಿವರು ತಮ ಮನವಿಗೆ ಸ್ಪಂದಿಸಿ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಲು ಒಪ್ಪಿದ್ದರು.
ಸ್ಥಳ ಗುರುತಿಸುವ ವಿಚಾರವಾಗಿ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ನಕಾರಾತಕ ವರದಿ ನೀಡಿದ್ದರು. ಸೂಚಿಸಲಾದ ಸ್ಥಳ ಕೇಂದ್ರೀಯ ವಿದ್ಯಾಲಯಕ್ಕೆ ಸೂಕ್ತವಾಗಿಲ್ಲ ಎಂದು ಕೇಂದ್ರಕ್ಕೆ ಮಾಹಿತಿ ನೀಡಿದ್ದರಿಂದಾಗಿ ಮಂಜೂರಾತಿ ವಿಳಂಬವಾಗಿತ್ತು. ಆ ಸಂದರ್ಭದಲ್ಲಿ ತಾವು ಉಪಮುಖ್ಯಮಂತ್ರಿಯಾಗಿದ್ದು, ಸಾರಿಗೆ ಇಲಾಖೆ ಜವಾಬ್ದಾರಿ ನೋಡಿಕೊಳ್ಳುತ್ತಿದೆ.
ಆ ಅವಧಿಯಲ್ಲಿ ಸಾರಿಗೆ ನಿಗಮಗಳ ನೌಕರರು ಸುದೀರ್ಘ ಮುಷ್ಕರ ನಡೆಸಿದ್ದರು. ಅದನ್ನು ಬಗೆ ಹರಿಸುವಲ್ಲಿ ತಾವು ಹೆಚ್ಚಿನ ಗಮನ ಹರಿಸಬೇಕಾಯಿತು. ಈ ನಡುವೆ ಸ್ಥಳೀಯ ಅಧಿಕಾರಿಗಳು ಕೇಂದ್ರಕ್ಕೆ ರವಾನಿಸಿದ ವರದಿಯ ಬಗ್ಗೆ ಗಮನಹರಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ದೇಶದಲ್ಲಿ ಹೊಸದಾಗಿ 57 ಕೇಂದ್ರೀಯ ವಿದ್ಯಾಲಯಗಳು ಮಂಜೂರಾಗಿವೆ. ಎಲ್ಲವೂ ಬಹುತೇಕ ಜಿಲ್ಲಾ ಕೇಂದ್ರಗಳಲ್ಲೇ ಸ್ಥಾಪನೆಯಾಗಲಿವೆ. ಅಥಣಿಯಲ್ಲಿ ಮಾತ್ರ ತಾಲ್ಲೂಕು ಕೇಂದ್ರದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ. ಇದಕ್ಕೆ ತಮ ಶ್ರಮವೇ ಕಾರಣ ಎಂಬುದು ಲಕ್ಷ್ಮಣ ಸವದಿ ಅವರ ಅಂಬೋಣವಾಗಿದೆ.
ಸತೀಶ್ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕ ಎಲ್ಲಾ ಕ್ರೆಡಿಟ್ ಅನ್ನು ತಾವೇ ಪಡೆದುಕೊಳ್ಳುವ ಮೂಲಕ ಲಕ್ಷ್ಮಣ ಸವದಿವರನ್ನು ಕಡೆಗಣಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಕ್ರೆಡಿಟ್ ವಾರ್ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಸಹೋದರರ ವರ್ತನೆಗಳ ಬಗ್ಗೆ ಲಕ್ಷ್ಮಣ ಸವದಿ ತೀವ್ರ ಸಮಾಧಾನಗೊಂಡಿದ್ದು, ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಬೆಳಗಾವಿ ರಾಜಕಾರಣ ರಾಜ್ಯಮಟ್ಟದ ಮೇಲೆ ತೀವ್ರವಾದ ಪರಿಣಾಮ ಬೀರಿರುವ ಸಾಕಷ್ಟು ಉದಾಹರಣೆಗಳಿವೆ. ಪ್ರಸ್ತುತ ಸಂದರ್ಭದಲ್ಲಿ ಅದೇ ರೀತಿಯ ಸನ್ನಿವೇಶಗಳು ಕಂಡು ಬರುತ್ತಿವೆ. ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ನ ಸಮಿಶ್ರ ಸರ್ಕಾರ ಪತನಗೊಳ್ಳಲು ಬೆಳಗಾವಿಯ ಜಿಲ್ಲೆ ರಾಜಕಾರಣವೆ ಪ್ರಮುಖ ಕಾರಣವಾಗಿತ್ತು ಎಂಬುದು ಗಮನಾರ್ಹ.
