ಬೆಂಗಳೂರು,ಜ.6- ಮೇಲಿಂದ ಮೇಲೆ ಕಾಂಗ್ರೆಸ್‌ನ ಗೂಂಡಾಗಿರಿ ಸಂಸ್ಕೃತಿಗೆ ಕನ್ನಡಿ ಹಿಡಿಯುವ ಪ್ರಚೋದನಕಾರಿ ಘಟನೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮಾತ್ರವಲ್ಲ, ಸಂಪೂರ್ಣ ಆಡಳಿತ ಯಂತ್ರವೇ ಕುಸಿದಿದೆ. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಅಸಭ್ಯ, ಅಸಹ್ಯಕರ ಗೂಂಡಾ ವರ್ತನೆಯನ್ನು ಗಮನಿಸುತ್ತಿದ್ದು, ನಿಮ ಎಲ್ಲ ಕುಕೃತ್ಯಗಳಿಗೂ
ಅವರೇ ಅಂತ್ಯ ಹಾಡುವ ದಿನ ದೂರವಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲೇಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಗುರಿ ಎನ್ನುವಂತೆ ತೋರುತ್ತಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ನೋಡಿ ನಾವೇನು ಕಮಿ ಎನ್ನುವಂತೆ ಕಾಂಗ್ರೆಸ್ ಸಚಿವರು, ಶಾಸಕರು ಕೂಡ ಬಹಿರಂಗವಾಗಿ ಗೂಂಡಾವರ್ತನೆಗೆ ಇಳಿದಿದ್ದಾರೆ.
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ, ತಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕಾಂಗ್ರೆಸ್ ಕುತಂತ್ರ, ಶಾಂತಿಯ ತೋಟವಾಗಿದ್ದ ಕರ್ನಾಟಕದ ಹಿರಿಮೆಗೆ ಮಸಿ ಬಳಿಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುವುದಂತೂ ದೂರವೇ ಉಳಿಯಿತು. ಕೇಂದ್ರ ಸರ್ಕಾರದ ವತಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವುದಕ್ಕೂ ಕಲ್ಲು ಹಾಕುವ ಕೀಳು ಪ್ರವೃತ್ತಿ, ಈ ಕಾಂಗ್ರೆಸ್ ಎಷ್ಟು ಹೀನಾಯ ಸ್ಥಿತಿ ತಲುಪಿದೆ ಎನ್ನುವುದಕ್ಕೆ ಸಾಕ್ಷಿ ಎಂದು ವಾಗ್ದಳಿ ನಡೆಸಿದ್ದಾರೆ.
ಒಂದೆಡೆ, ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರ ಕಾರಿಗೆ ಅಡ್ಡಪಡಿಸಿ, ಉದ್ದೇಶಪೂರ್ವಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮುಂದಾಳತ್ವದಲ್ಲಿ ಕಾಂಗ್ರಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.
ಇನ್ನೊಂದೆಡೆ ಬೀದರ್‌ನಲ್ಲಿ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಉಪಸ್ಥಿತಿಯಲ್ಲೇ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ನಮ ಪಕ್ಷದ ಹುಮನಾಬಾದ್ ಶಾಸಕರಾದ ಸಿದ್ದು ಪಾಟೀಲ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.
