ಬೆಂಗಳೂರು,ಡಿ.3- ನಮ್ಮ ಮೆಟ್ರೋ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗಗಳಲ್ಲಿ ಆಹಾರ ಮಳಿಗೆ( ಫುಡ್‌ಕೋರ್ಟ್)ಗಳನ್ನು ತೆರೆಯಲು ಅನುಮತಿ ಕೊಟ್ಟಿರುವುದರ ಹಿಂದೆ ಸಾಕಷ್ಟು ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ.
ಜಯನಗರ ಶಾಸಕ ರಾಮಮೂರ್ತಿ, ಬೆಂಗಳೂರು ಸೆಂಟ್ರಲ್ ಬಿಜೆಪಿ ಅಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಬಿಬಿಎಂಪಿ ಸದಸ್ಯ ಸೋಮಶೇಖರ್, ಸೇರಿದಂತೆ ಮತ್ತಿತರರು ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದರು,ಮೆಟ್ರೊ ನಿಲ್ದಾಣದ ಪಾರ್ಕಿಂಗ್ ಜಾಗಗಳಲ್ಲಿ ಹೋಟೆಲ್ ಉದ್ಯಮಕ್ಕೆ ಅವಕಾಶ ನೀಡಿರುವುದರಿಂದ ಭಾರೀ ಅಕ್ರಮ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಯನಗರ ಶಾಸಕ ರಾಮಮೂರ್ತಿ, ಪಾರ್ಕಿಂಗ್ ಜಾಗಗಳಲ್ಲಿ ಫುಡ್‌ಕೋರ್ಟ್ ತೆರೆಯಲು ಅವಕಾಶ ನೀಡಿರುವುದು ಅವೈಜ್ಞಾನಿಕ. ಸಾರ್ವಜನಿಕರು ಮತ್ತು ವಾಹನಗಳನ್ನು ಪಾರ್ಕಿಂಗ್ ಮಾಡಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ.
ನಾವು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರರ ಮೇಲೆ ತನಿಖೆ ನಡೆಸಬೇಕೆಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯಾಂಶವು ಹೊರಬರುತ್ತದೆ ಎಂದು ಹೇಳಿದರು.
ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
