ಬೆಂಗಳೂರು, ಡಿ.20- ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ಸಿನ ವರಿಷ್ಠ ನಾಯಕರು ಕರೆ ಮಾಡಿ, ಏನೋ ಹೇಳಿದ್ದಾರೆ. ಯಾವಾಗ ದೆಹಲಿಗೆ ಬರಬೇಕು ಎಂದೂ ತಿಳಿಸಿದ್ದಾರೆ. ನಾನು ಮತ್ತು ಮುಖ್ಯಮಂತ್ರಿಯವರು ಆ ವೇಳೆಗೆ ವರಿಷ್ಠರನ್ನು ಭೇಟಿ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟ ಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಮತ್ತು ನಾನು ದೆಹಲಿಗೆ ಹೋಗಲೇಬೇಕು. ಹೋಗುತ್ತೇವೆ ಎಂದು ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಕ್ಕೆ ಎಂದು ಯಾವುದೇ ತೀರ್ಮಾನವಾಗಿಲ್ಲ. ಹೈಕಮಾಂಡ್ ನನ್ನ ಪರವಾಗಿದೆ. ಈಗ ಮುಖ್ಯಮಂತ್ರಿ ಆಗಿದ್ದೇನೆ. ಹೈ ಕಮಾಂಡ್ ಬಯಸಿದರೆ ಮುಂದೆಯೂ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಇಂದು ಡಿ.ಕೆ.ಶಿವಕುಮಾರ್, ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಹೈಕಮಾಂಡ್ ನಾಯಕರನ್ನು ಇಬ್ಬರು ಭೇಟಿಯಾಗುತ್ತೇವೆ. ನಾನಂತೂ ಕದ್ದು ದೆಹಲಿಗೆ ಹೋಗುವುದಿಲ್ಲ, ಹೇಳಿಯೇ ಹೋಗುತ್ತೇನೆ ಎಂದಿದ್ದಾರೆ. ಹೈಕಮಾಂಡ್ ನಾಯಕರು ದೆಹಲಿಯಿಂದ ನಮಿಬ್ಬರಿಗೂ ಫೋನ್ ಮಾಡಿ ಏನೋ ಹೇಳಿದ್ದಾರೆ. ಯಾವಾಗ ಕರೆಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಹೋಗಿಯೇ ಹೋಗುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಸೂಕ್ತ ಸಮಯದಲ್ಲಿ ಭೇಟಿ ಮಾಡುತ್ತೇವೆ. ಸಮಯ ನಿಗದಿಗಾಗಿ ವರಿಷ್ಠರ ಕರೆಗಾಗಿ ಕಾಯುತ್ತಿದ್ದೇವೆ. ಮುಖ್ಯಮಂತ್ರಿ ಅವರ ಜೊತೆಯಲ್ಲೇ ಹೋಗಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಕಾವೇರುತ್ತಿರುವ ಕುರ್ಚಿ ಕದನ:
ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ನಮ ಐದಾರು ಮಂದಿ ನಡುವೆ ನಡೆದಿರುವ ಒಪ್ಪಂದವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ತಾವು ಇಚ್ಛಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಕಳೆದ ತಿಂಗಳು ರಾಮನಗರದಲ್ಲಿ ಹೇಳಿದ್ದರು. ಆದರೆ ನಿನ್ನೆ ಬೆಳಗಾವಿಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಯಾವುದೇ ಒಪ್ಪಂದವಾಗಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್ ಅಧಿಕಾರ ಹಂಚಿಕೆಯ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಕೆಲ ಶಾಸಕರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಒತ್ತಡ ಹೇರಿದ್ದರು.
ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಪದೇ ಪದೇ ಔತಣಕೂಟಗಳನ್ನು ನಡೆಸಿ ಪ್ರತಿತಂತ್ರ ರೂಪಿಸಲಾರಂಭಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಹೈಕಮಾಂಡ್ ಇಬ್ಬರಿಗೂ ಕರೆ ಮಾಡಿ, ಒಟ್ಟಿಗೆ ಕುಳಿತು ಉಪಾಹಾರಕೂಟ ನಡೆಸಿ ವಾತಾವರಣ ತಿಳಿಗೊಳಿಸುವಂತೆ ತಾಕೀತು ಮಾಡಿದ್ದರು. ಅದರಂತೆ ಇಬ್ಬರ ಮನೆಯಲ್ಲೂ ಉಪಾಹಾರಕೂಟಗಳು ನಡೆದಿದ್ದವು.
ಬೆಳಗಾವಿಯ ಅಧಿವೇಶನದ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗಿತ್ತು. ಅತ್ತ ಬೆಳಗಾವಿಯಲ್ಲೂ ಪ್ರತ್ಯೇಕ ಊಟದ ಸಭೆಗಳು ನಡೆದಿದ್ದವು. ಈಗ ಬೆಳಗಾವಿ ಅಧಿವೇಶನ ಮುಗಿದಿದೆ.
ಮತ್ತೆ ಅಧಿಕಾರ ಹಂಚಿಕೆಯ ಚರ್ಚೆಗಳು ಗರಿಗೆದರಿವೆ. ಉಪಾಹಾರ ಕೂಟದ ಬಳಿಕ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾವಿಬ್ಬರೂ ಅಣ್ಣ ತಮಂದಿರಂತೆ. ಹೈಕಮಾಂಡ್ ನೀಡುವ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದರು.
ನಂತರದ ಬೆಳವಣಿಗೆಯಲ್ಲಿ ಅಧಿಕಾರ ಹಂಚಿಕೆಯ ಗುಟ್ಟನ್ನು ಇಬ್ಬರೂ ಬಿಟ್ಟು ಕೊಟ್ಟಿಲ್ಲ. ಅತ್ತ ಸಿದ್ದರಾಮಯ್ಯ ಯಾವುದೇ ಒಪ್ಪಂದವಾಗಿಲ್ಲ ಎನ್ನುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರು ನಮಗೆ ಏನೋ ಹೇಳಿದ್ದಾರೆ ಎನ್ನುತ್ತಿದ್ದಾರೆ.
ಎಲ್ಲವೂ ಸರಿ ಇದೆ ಎನ್ನುತ್ತಲೇ ಇಬ್ಬರು ನಾಯಕರ ಭಿನ್ನ ಹೇಳಿಕೆಗಳು ಶಾಸಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿವೆ. ಆಡಳಿತ ವ್ಯವಸ್ಥೆಯ ಮೇಲೂ ಭಾರಿ ಪರಿಣಾಮ ಬೀರುತ್ತಿದೆ.
ಡಿ.ಕೆ.ಶಿವಕುಮಾರ್ ಬಣದ ನಾಯಕರು, ಸಂಕ್ರಾಂತಿಯ ವೇಳೆಗೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಬಣದಲ್ಲಿ ನಾಯಕತ್ವ ಅಬಾಧಿತ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಡಿ.ಕೆ.ಶಿವಕುಮಾರ್ ಗೆ 2028ರಲ್ಲಿಯೇ ಅವಕಾಶ ಸಿಗಬೇಕು ಎನ್ನುತ್ತಿದ್ದಾರೆ. ಈ ಹಗ್ಗ ಜಗ್ಗಾಟಕ್ಕೆ ಹೈಕಮಾಂಡ್ ಯಾವಾಗ ತೆರೆ ಎಳೆಯಲಿದೆ ಎಂದು ಕಾದು ನೋಡಬೇಕಿದೆ.
