ಮಂಗಳೂರು, ಜ.11- ರಾಜ್ಯದಲ್ಲಿ ಕುರ್ಚಿಗಾಗಿ ಯಾವುದೇ ಕಾಳಗ ನಡೆಯುತ್ತಿಲ್ಲ. ಈ ವಿಚಾರವಾಗಿ ಅನಗತ್ಯವಾದ ಚರ್ಚೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುರ್ಚಿ ಕಾಳಗ ಎಂಬುದೇ ಇಲ್ಲ. ಎಲ್ಲಿ ? ಯಾರು ? ಕಿತಾಡುತ್ತಿದ್ದಾರೆ ಎಂಬುದನ್ನು ತೋರಿಸಿ. ಅನಗತ್ಯವಾಗಿ ಈ ವಿಚಾರ ಕುರಿತು ವದಂತಿ ಹರಡಬಾರದು ಎಂದರು.
ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸಂಕ್ರಾಂತಿಯ ನಂತರ ಕುರ್ಚಿ ಕಾಳಗ ಭಾಗ-2 ಆರಂಭವಾಗುತ್ತದೆ ಎಂದಿರುವುದಕ್ಕೆ ಕಾಳಗ ಎಲ್ಲಿದೆ ತೋರಿಸಿ ಎಂದು ಸವಾಲು ಹಾಕಿದರು. ದ್ವೇಷ ಭಾಷಣ ಮಸೂದೆಯನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿದೆ. ರಾಜ್ಯಪಾಲರು ಅದನ್ನು ಅಂಗೀಕಾರವನ್ನೂ ಮಾಡಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ವಾಪಸ್ ಕಳುಹಿಸಿಲ್ಲ. ರಾಜ್ಯಪಾಲರು ನಮನ್ನು ಯಾವಾಗ ಕರೆಯುತ್ತಾರೆ ಎಂದು ಕಾಯುತ್ತಿದ್ದೇವೆ.
ಕರೆದರೆ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಯ ಬಗ್ಗೆ ವಿವರಣೆ ನೀಡುತ್ತೇವೆ ಎಂದರು. ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿ ಮತ್ತು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಕ್ಕೆ ರಾಜ್ಯಪಾಲರು ಕೆಲ ಸ್ಪಷ್ಟನೆಗಳನ್ನು ಕೇಳಿದ್ದಾರೆ. ಆ ಮಸೂದೆಗಳ ವಿಷಯವಾಗಿ ರಾಜ್ಯಪಾಲರಿಗೆ ಅಗತ್ಯವಾದ ಮಾಹಿತಿಯನ್ನು ನೀಡಲಾಗುವುದು ಎಂದರು.
ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಈಗ ಪಾದಯಾತ್ರೆ ಮಾಡಲು ಮುಂದಾಗಿರುವುದಕ್ಕೆ ತಿರುಗೇಟು ನೀಡಿದ ಅವರು, ಗಲಭೆಗೆ ಬಿಜೆಪಿ ನಾಯಕರಿಂದಲೇ ಪ್ರಚೋದನೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಈ ಹಿಂದೆ ತಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದಾಗ ಅಕ್ರಮ ಗುಡಿಗಾರಿಕೆಯ ವಿಷಯ ಪ್ರಮುಖವಾಗಿತ್ತು. ಈಗ ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಅವರ ಬೆಂಬಲಿಗರು ಪಾದಯಾತ್ರೆ ಮಾಡಲು ಯಾವ ಕಾರಣ ಇದೆ ಎಂದು ಪ್ರಶ್ನಿಸಿದರು.
ಬಳ್ಳಾರಿಯಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಅದರ ಬಗ್ಗೆ ಆಗಿನ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ವರದಿ ನೀಡಿದ್ದರು. ರಿಪಬ್ಲಿಕ್ ಬಳ್ಳಾರಿ ನಿರ್ಮಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ವಿಧಾನಸಭೆಯಲ್ಲಿ ನಾನು ಪ್ರಶ್ನಿಸಿದಾಗ ರೆಡ್ಡಿ ಸಹೋದರರು ಮತ್ತು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೈ ಮೇಲೆ ಬಿದ್ದಿದ್ದರು. ಅದಕ್ಕಾಗಿ ಪಾದಯಾತ್ರೆ ನಡೆಸಿದ್ದೆ ಈಗ ಅಂತಹ ಯಾವ ಮಹತ್ವದ ಸಂದರ್ಭ ಇದೆ ಎಂದು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಪ್ರಸ್ತುತ ನಡೆದಿರುವ ಗಲಾಟೆಗೆ ಪ್ರಚೋದನೆ ಯಾರು ? ವಾಲೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸಲಾಗಿತ್ತು. ಅದನ್ನು ತೆಗೆಯುವ ಅಗತ್ಯ ಏನಿತ್ತು? ಬ್ಯಾನರ್ ತೆಗೆದಿದ್ದೆ ಗಲಾಟೆಗೆ ಕಾರಣ ಅಲ್ಲವೇ ? ಬ್ಯಾನರ್ ತೆಗೆಯದಿದ್ದರೆ ಪ್ರಚೋದನೆಯೇ ಆಗುತ್ತಿರಲಿಲ್ಲ. ಗಲಾಟೆಯು ನಡೆಯುತ್ತಿರಲಿಲ್ಲ ಎಂದರು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಮತ್ತು ಸಹೋದರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಶ್ರೀರಾಮುಲು ಕೂಡ ಸೋತಿದ್ದಾರೆ.
ಅಧಿಕಾರ ಕಳೆದುಕೊಂಡಿದ್ದಕ್ಕಾಗಿ ಆಸೂಯೆಯಿಂದ ಗಲಾಟೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕೇರಳ ಸರ್ಕಾರ ಮಲೆಯಾಳಂ ಭಾಷೆಯನ್ನೇ ಕಲಿಯಬೇಕು ಎಂದು ಬಲವಂತವಾಗಿ ಕಾನೂನು ರೂಪಿಸಿದೆ. ಭಾಷಾ ಅಲ್ಪಸಂಖ್ಯಾತರ ಮೇಲೆ ಬಲವಂತವಾಗಿ ಭಾಷೆಯನ್ನು ಹೇರುತ್ತಿರುವುದು ಸರಿಯಲ್ಲ. ಆ ರೀತಿ ಮಾಡಲು ಅವರಿಗೆ ಅಧಿಕಾರ ಇಲ್ಲ ಎಂದರು. ಮಾತೃಭಾಷೆಯನ್ನು ಕಡೆಗಣಿಸಿ ಮಲೆಯಾಳಂ ಕಲಿಯಬೇಕು ಎಂಬ ವಿಧೇಯಕ ರೂಪಿಸಲಾಗಿದೆ. ಅದಕ್ಕೆ ಅಲ್ಲಿನ ರಾಜ್ಯಪಾಲರು ಸಹಿ ಹಾಕಿದರೆ ಕಾನೂನಾಗಿ ಜಾರಿಗೆ ಬರಲಿದೆ. ಆ ಸಂದರ್ಭದಲ್ಲಿ ಕರ್ನಾಟಕ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
