Monday, January 5, 2026
Homeರಾಜಕೀಯದೀರ್ಘಕಾಲ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ, ಆದರೆ ಕಾಂಗ್ರೆಸ್‌ನಲ್ಲಿಲ್ಲ ಸಂಭ್ರಮ

ದೀರ್ಘಕಾಲ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ, ಆದರೆ ಕಾಂಗ್ರೆಸ್‌ನಲ್ಲಿಲ್ಲ ಸಂಭ್ರಮ

Siddaramaiah's record as CM for a long time, but no celebration in Congress

ಬೆಂಗಳೂರು, ಜ.4- ಅಧಿಕಾರ ಹಂಚಿಕೆಯ ಗೊಂದಲದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐತಿಹಾಸಿಕ ದಾಖಲೆಯ ಸಂಭ್ರಮ ಕಳೆಗುಂದುವಂತಾಗಿದೆ.ರಾಜ್ಯದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಈ ಸಂಭ್ರಮವನ್ನು ಅಧಿಕೃತವಾಗಿ ಆಚರಿಸಲು ಕಾಂಗ್ರೆಸ್‌‍ ಪಕ್ಷವಾಗಲಿ ಅಥವಾ ಸರಕಾರದಿಂದಾಗಲಿ ಯಾವುದೇ ಕಾರ್ಯಕ್ರಮಗಳು ಯೋಜನೆಗೊಂಡಿಲ್ಲ. ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಸಂಭ್ರಮ ಇವೆಯಾದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿ, ಸಂಭ್ರಮಾಚರಣೆ ಮಾಡಲು ಹಿಂದೇಟು ಹಾಕುವಂತಹ ವಾತಾವರಣ ಇದೆ.

ಅಹಿಂದ ಬಳಗದ ಯುವ ಘಟಕ ನಾಟಿ ಕೋಳಿ ಊಟದ ಪಾರ್ಟಿ ಮಾಡುವ ಮೂಲಕ ಪಕ್ಷ ಹಾಗೂ ಸರ್ಕಾರದ ಹೊರತಾಗಿ ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ಅವರ ಆಪ್ತ ಬಳಗ ಕಾರ್ಯಕ್ರಮ ಮಾಡಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಳ್ಳುತ್ತಿದೆ. ನಾಯಕತ್ವ ಬದಲಾವಣೆಯಾಗಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ದಾಖಲೆ ಕುರಿತು ಸಂಭ್ರಮಾಚರಣೆ ಮಾಡಿದರೆ, ಬಹುಶಃ ಅಸಹನೆಯ ವಾತಾವರಣ ಹೆಚ್ಚಾಗಬಹುದು. ನಾಯಕತ್ವ ಬದಲಾವಣೆಯಾಗಲೇಬೇಕು ಎಂಬ ಪಟ್ಟುಗಳು ಮತ್ತಷ್ಟು ತೀವ್ರವಾಗುವ ಆತಂಕ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಕಾಡುತ್ತಿದೆ. ಹೀಗಾಗಿ ಯಾವುದೇ ಸಂಭ್ರಮ ಆಚರಿಸದೆ ತಟಸ್ಥವಾಗಿರುವ ನಿರ್ಧಾರಕ್ಕೆ ಸಿದ್ದು ಬಣ ಬಂದಂತಿದೆ.

ಸಂಭ್ರಮಾಚರಣೆಯ ಕಾರ್ಯಕ್ರಮ ಸದ್ಯಕ್ಕೆ ಬೇಡ ಎಂದು ಮುಖ್ಯಮಂತ್ರಿ ತಮ ಬೆಂಬಲಿಗರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಫೆಬ್ರವರಿ 13 ಕ್ಕೆ ರಾಜ್ಯ ಸರ್ಕಾರಕ್ಕೆ ಒಂದು ಸಾವಿರ ದಿನಗಳು ತುಂಬಲಿದ್ದು, ಆ ಸಂದರ್ಭದಲ್ಲಿ ಹಾವೇರಿಯಲ್ಲಿ ಬೃಹತ್‌ ಸಮಾವೇಶ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ.

ದಾಖಲೆ ನಿರ್ಮಾಣ:
ದಿವಂಗತ ಡಿ.ದೇವರಾಜ ಅರಸ್‌‍ ಅವರು 1972ರ ಮಾರ್ಚ್‌ 22 ರಿಂದ 1977ರ ಡಿಸೆಂಬರ್‌ 31ರವರೆಗೆ ಐದು ವರ್ಷಗಳ ಕಾಲ ಪೂರ್ಣಾವಧಿಯ ಮುಖ್ಯಮಂತ್ರಿ ಆಡಳಿತ ನಡೆಸಿದ್ದರು. ಎರಡನೇ ಬಾರಿಗೆ 1978ರ ಫೆಬ್ರವರಿ 28ರಿಂದ 1980ರ ಜನವರಿ 7ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಒಟ್ಟು ಏಳು ವರ್ಷ ಏಳು ತಿಂಗಳ ಕಾಲಾವಧಿಯಲ್ಲಿ 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2013ರ ಮೇ ತಿಂಗಳಿನಿಂದ 2018ರ ಮೇವರೆಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದು, 40 ವರ್ಷಗಳ ಬಳಿಕ ಕರ್ನಾಟಕ ರಾಜಕಾರಣದಲ್ಲಿ ದೇವರಾಜ್‌ ಅರಸು ಅವರನ್ನು ಹೊರತುಪಡಿಸಿ ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸಿದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರವಾಗಿದ್ದರು.

2023 ವಿಧಾನಸಭೆ ಚುನಾವಣೆ ಬಳಿಕ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ಧಾರೆ. ಇದೇ ಜನವರಿ 6ಕ್ಕೆ ಸಿದ್ದರಾಮಯ್ಯ ಅವರು 2,792 ದಿನಗಳ ಅವಧಿ ಪೂರ್ಣಗೊಳಿಸಲಿದ್ದಾರೆ. ದೇವರಾಜ್‌ ಅರಸ್‌‍ ಅವರ ದಾಖಲೆಯನ್ನು ಸರಿಸಮಗೊಳಿಸಲಿದ್ದಾರೆ. ಜನವರಿ 7 ಕ್ಕೆ ಸಿದ್ದರಾಮಯ್ಯ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾದ ದಾಖಲೆ ನಿರ್ಮಿಸಲಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಹೀಗಾಗಿ ಜನವರಿ 7ರವರೆಗೆ ಸಿದ್ದರಾಮಯ್ಯ ಅವರ ಅಧಿಕಾರ ಅಭಾದಿತವಾಗಲಿದ್ದು, ಹೊಸ ದಾಖಲೆ ನಿರ್ಮಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಸಂಭ್ರಮ ಸಿದ್ದರಾಮಯ್ಯ ಅವರ ಬಣಕ್ಕೆ ಅಷ್ಟೇ ಅಲ್ಲದೆ ಕಾಂಗ್ರೆಸ್‌‍ ಪಕ್ಷದಲ್ಲೂ ಹಬ್ಬದ ವಾತಾವರಣ ನಿರ್ಮಿಸಬೇಕಿತ್ತು. ಆದರೆ ಅಧಿಕಾರ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಚರ್ಚೆಗಳು ದಾಖಲೆಯನ್ನು ಸಂಭ್ರಮಿಸಲಾಗದಂತ ಪರಿಸ್ಥಿತಿಯನ್ನು ತಂದೊಡ್ಡಿವೆ.

RELATED ARTICLES

Latest News