Friday, December 19, 2025
Homeರಾಜಕೀಯನಿಲ್ಲದ ಸಿಎಂ ಕುರ್ಚಿ ಕದನ : ಮತ್ತೆ ಬಣಗಳ ಸಭೆ

ನಿಲ್ಲದ ಸಿಎಂ ಕುರ್ಚಿ ಕದನ : ಮತ್ತೆ ಬಣಗಳ ಸಭೆ

DK Shvivakumar

ಬೆಳಗಾವಿ, ಡಿ.18- ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್‌‍ ಪಾಳೆಯದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿರುವಾಗಲೇ, ಭೋಜನಕೂಟ ಮತ್ತು ಪ್ರತ್ಯೇಕ ಸಭೆಗಳ ಭರಾಟೆ ಜೋರಾಗಿದೆ. ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ನಿನ್ನೆ ರಾತ್ರಿ ಸಮಾನ ಮನಸ್ಕ ಶಾಸಕರಿಗೆ ಔತಣಕೂಟ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಹಸ್ಯ ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಕಳೆದ ವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರು ಪ್ರತ್ಯೇಕ ಔತಣಕೂಟ ನಡೆಸಿದ್ದರು. ಅದರಲ್ಲಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಸುಮಾರು 75 ಶಾಸಕರು ಭಾಗವಹಿಸಿದ್ದರು ಎಂದು ಹೇಳಲಾಗಿತ್ತು.

ಕಲಾಪದ ಆರಂಭದಲ್ಲಿ ಬೆಳಗಾವಿಯ ಶಾಸಕ ಆಸಿಫ್‌ ಸೇಠ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಪ್ರತ್ಯೇಕ ಔತಣಕೂಟ ಆಯೋಜಿಸಲಾಗಿತ್ತು. ಈಗ ಸತೀಶ್‌ ಜಾರಕಿಹೊಳಿ, ಎರಡನೇ ಸುತ್ತಿನ ಔತಣಕೂಟ ಆಯೋಜಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಗಣೇಶ್‌ ಹುಕ್ಕೇರಿ, ಬಿ.ಆರ್‌.ಪಾಟೀಲ್‌, ವಿಶ್ವಾಸ್‌‍ ವೈದ್ಯ, ಮಹಾಂತೇಶ ಕೌಜಲಗಿ ರಾಮನಾಥ್‌ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಕಾಂಗ್ರೆಸ್‌‍ ನಲ್ಲಿ ನಡೆಯುತ್ತಿರುವ ದಿನಕ್ಕೊಂದು ಔತಣಕೂಟಗಳ ಬಗ್ಗೆ ವಿರೋಧ ಪಕ್ಷಗಳ ನಾಯಕರು ಲೇವಡಿ ಮಾಡಿದ್ದರು. ಆ ಬಳಿಕ ಕಡಿಮೆಯಾಗಿದ್ದ ಡಿನ್ನರ್‌ ಮೀಟಿಂಗ್‌ ಗಳು ಮತ್ತೆ ಶುರುವಾಗಿವೆ. ಅದರಲ್ಲೂ ಸಿದ್ದರಾಮಯ್ಯ ಅವರ ಬಣದಲ್ಲಿನ ಶಾಸಕರ ಪ್ರತ್ಯೇಕ ಸಭೆಗಳೇ ಹೆಚ್ಚಾಗಿ ನಡೆಯುತ್ತಿವೆ. ಈ ರಹಸ್ಯ ಸಭೆಗಳಲ್ಲಿ ನಾನಾ ರೀತಿಯ ತಂತ್ರಗಾರಿಕೆಗಳನ್ನು ರೂಪಿಸಲಾಗುತ್ತಿದೆ. ನಿನ್ನೆಯ ಸಭೆಯಲ್ಲೂ ರಾಜಕೀಯ ಕುರಿತು ಚರ್ಚೆಗಳಾಗಿದ್ದು, ಒಗಟ್ಟಿನ ಮಂತ್ರ ಜಪಿಸಲಾಗಿದೆ ಮತ್ತಷ್ಟು ಶಾಸಕರನ್ನು ಕ್ರೋಢೀಕರಿಸಿ ಸಿದ್ದರಾಮಯ್ಯ ಅವರ ತಲೆ ದಂಡವನ್ನು ತಪ್ಪಿಸಬೇಕು ಎಂಬ ಚರ್ಚೆಯಾಗಿರುವ ಮಾಹಿತಿ ಇದೆ.

ವಿಧಾನ ಮಂಡಲದ ಅಧಿವೇಶನದ ಬಳಿಕ ಕಾಂಗ್ರೆಸ್‌‍ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ದೆಹಲಿಗೆ ಕರೆಸಿಕೊಂಡು ಅಧಿಕಾರ ಹಂಚಿಕೆಯ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಗುಂಪುಗಳಲ್ಲೂ ಬೇರೆ ಬೇರೆ ರೀತಿಯ ತಂತ್ರಗಾರಿಕೆಗಳು ನಡೆಯುತ್ತಿವೆ.

ನಿನ್ನೆಯ ಔತಣಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಡಿನ್ನರ್‌ ಮೀಟಿಂಗ್‌ ಆಗಿರುವುದು ನಿಜ. ಅಲ್ಲಿ ವಿಸ್ಕಿ ಕುಳಿತ್ತಿದ್ದೇವೆ, ಮಾಂಸ ತಿಂದು ಎರಡು ಸ್ಪೂನ್‌ ಅನ್ನ ತಿಂದಿದ್ದೇವೆ. ಅದನ್ನು ಬಿಟ್ಟು ಬೇರೆ ಏನು ಇಲ್ಲ ಎಂದಿದ್ದಾರೆ.

ಅಲ್ಲಿ ರಾಜಕೀಯವೂ ಚರ್ಚೆಯಾಗಿದೆ, ಹೇಳಬೇಕಾದ ವಿಷಯಗಳನ್ನು ಸತೀಶ್‌ ಜಾರಕಿಹೊಳಿಯವರೇ ಮೂರ್ನಾಲ್ಕು ದಿನಗಳಲ್ಲಿ ಹೇಳಬಹುದು. ವಾಲೀಕಿ ಸಮುದಾಯಕ್ಕೆ ಸಂಪುಟ ಪುನಾರಚನೆಯ ವೇಳೆಯಲ್ಲಿ ಎರಡು ಸ್ಥಾನಗಳು ಸಿಗಲಿವೆ. ಅದರಲ್ಲಿ ನನಗೆ ಅವಕಾಶ ಸಿಗಲಿದೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಅದರ ಬಗ್ಗೆ ನಾನು ತಲೆಯನ್ನೂ ಕೆಡಿಸಿಕೊಂಡಿಲ್ಲ. ಕರೆಯದೆ ದೆಹಲಿಗೆ ಹೋಗಲು ನನಗೆ ಹುಚ್ಚು ಹಿಡಿದಿಲ್ಲ. ಅಲ್ಲಿಗೆ ಹೋಗಿ ಕರ್ನಾಟಕ ಭವನದಲ್ಲಿ ಊಟ ಮಾಡಿ ಬರಲಿಕ್ಕೆ ಹೋಗಬೇಕಾ ಎಂದು ಹೇಳಿದ್ದಾರೆ. ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಸ್ಪಷ್ಟ ಪಡಿಸಿದ್ದಾರೆ.
ನಮ ಶಾಸಕರಲ್ಲಿ ಒಳ್ಳೊಳ್ಳೆ ಕಲಾವಿದರಿದ್ದಾರೆ. ನಿನ್ನೆ ಊಟ ಮಾಡುತ್ತಾ ಒಂದಿಷ್ಟು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಖುಷಿಪಟ್ಟಿದ್ದೇವೆ ಎಂದರು.

ಮತ್ತೊಂದೆಡೆ ಬಿಜೆಪಿಯಲ್ಲಿ ಶಾಸಕರಾಗಿರುವ ರಮೇಶ್‌ ಜಾರಕಿಹೊಳಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿಯಾಗಿರುವುದು ಕುತೂಹಲಗಳನ್ನು ಕೆರಳಿಸಿದೆ. ಬೆಳಗಾವಿಯ ರಾಜಕಾರಣದ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ನೆಲೆಯಲ್ಲಿ ಈ ಬೆಳಗಾವಿಯ ಚಟುವಟಿಕೆಗಳು ರಾಜ್ಯ ರಾಜಕಾರಣವನ್ನು ನಿರ್ಧರಿಸುವ ಪ್ರಮುಖ ಬೆಳವಣಿಗೆಗಳೆಂದೇ ಪರಿಗಣಿಸಲಾಗಿದೆ.

RELATED ARTICLES

Latest News