ಬೆಂಗಳೂರು, ಡಿ.22– ರಾಜ್ಯ ರಾಜಕೀಯದಲ್ಲಿನ ಗೊಂದಲಗಳನ್ನು ಬಗೆ ಹರಿಸುವ ಬದಲಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ರಾಷ್ಟ್ರಮಟ್ಟದ ಕಾಂಗ್ರೆಸ್ಸಿನಲ್ಲಿಯೂ ಗೊಂದಲಗಳಿವೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಹೊಂದಾಣಿಕೆಯ ಕೊರತೆ ಇದೆಯೇ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.ಹೈಕಮಾಂಡ್ ನಾಯಕರು ಯಾರು ಎಂಬ ಪ್ರಶ್ನೆಗಳು ಕಾಂಗ್ರೆಸ್‌ನಲ್ಲಿ ಉದ್ಭವಿಸಿವೆ. ನಾಯಕತ್ವದ ಗೊಂದಲ ಸೃಷ್ಟಿಸಿರುವವರು ರಾಜ್ಯದ ನಾಯಕರು, ಅವರೇ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ನತ್ತ ಮುಖ ಮಾಡಬಾರದು ಎಂದು ನಿನ್ನೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಸಚಿವರು ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ನಾಯಕತ್ವದ ಗೊಂದಲಗಳನ್ನು ಇತ್ಯರ್ಥ ಪಡಿಸಬೇಕು ಎಂದು ಹೇಳುತ್ತಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಗೊಂದಲವನ್ನು ಸೃಷ್ಟಿ ಮಾಡಿದವರು ನೀವು. ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದ ಗೊಂದಲಗಳಿಂದ ವಿಮುಖರಾಗುತ್ತಿರುವುದು ಕಂಡು ಬಂದಿದೆ.
ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಮುಂದುವರಿಸಬೇಕು ಎಂಬ ಬಲವಾದ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ. ಖರ್ಗೆ ಕರ್ನಾಟಕದವೇ ಆಗಿದ್ದರೂ ರಾಜ್ಯ ರಾಜಕೀಯ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರು ಎಂಬ ಕಾರಣಕ್ಕೆ ಖರ್ಗೆ ಅವರನ್ನು ನಂಬಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಒಪ್ಪದ ಹಿನ್ನೆಲೆಯಲ್ಲಿ ಖರ್ಗೆ ಅಸಹಾಯಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಿಗಿಂತಲೂ ರಾಹುಲ್ ಗಾಂಧಿಯವರನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ವಿಚಾರದಲ್ಲಿ ಖರ್ಗೆ ಅವರ ಪಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ. ಕಳೆದ ತಿಂಗಳು ಕೆಲವು ಶಾಸಕರು ದೆಹಲಿ ಯಾತ್ರೆ ನಡೆಸಿದಾಗ ಮಲ್ಲಿಕಾರ್ಜುನ ಖರ್ಗೆ ತಮ ಅಸಮಾಧಾನ ಹೊರಹಾಕಿದ್ದರು. ಎಲ್ಲರೂ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು ಎಂದಿದ್ದರಲ್ಲದೆ, ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸಿ ವಿಷಯ ಇತ್ಯರ್ಥ ಪಡಿಸುವುದಾಗಿ ತಿಳಿಸಿದ್ದರು.
ಖರ್ಗೆ ಅವರು ದೆಹಲಿಗೆ ಹೋಗುತ್ತಿದ್ದಂತೆ ಇಬ್ಬರನ್ನು ದೆಹಲಿಗೆ ಕರೆಸುವ ಬದಲಿಗೆ, ಉಪಾಹಾರಕೂಟ ನಡೆಸಿ ವಿವಾದ ಬಗೆ ಹರಿಸಿಕೊಳ್ಳಿ ಎಂದು ದೆಹಲಿಯಿಂದ ಕೆ.ಸಿ.ವೇಣುಗೋಪಾಲ್ ಕರೆ ಮಾಡಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದರು.
ಅದರಂತೆ ಇಲ್ಲಿ ಉಪಾಹಾರಕೂಟಗಳು ನಡೆದು ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಹೇಳಿದಂತೆ ಎಲ್ಲರೂ ಕೇಳಬೇಕು ಎಂದಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೈಕಮಾಂಡ್ ಎಂದರೆ ಪಕ್ಷದ ಅಧ್ಯಕ್ಷರೇ ಅಲ್ಲವೇ ? ಪದೇ ಪದೇ ಹೈಕಮಾಂಡ್ ಎಂದು ಹೇಳುವ ಮೂಲಕ ಖರ್ಗೆಯವವರು ತಮಗಿಂತ ಬೇರೆ ಯಾರೋ ಪಕ್ಷದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ ಎಂಬ ಅನುಮಾನಗಳು ಚರ್ಚೆಯಾದವು.
ಖರ್ಗೆಯವರು ನೆಪ ಮಾತ್ರಕ್ಕೆ ಅಧ್ಯಕ್ಷರಾಗಿದ್ದಾರೆಯೇ ಅಥವಾ ಅವರ ಮಾತುಗಳಿಗೆ ಪಕ್ಷದಲ್ಲಿ ಮಾನ್ಯತೆ ಇಲ್ಲವೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ. ಡಿ.ಕೆ.ಶಿವಕುಮಾರ್ ತಾವು ಮಾಡಿದ ಕೆಲಸಕ್ಕೆ ಹೈಕಮಾಂಡ್ ಕೂಲಿ ನೀಡಲಿದೆ ಎಂದು ಬಲವಾಗಿ ನಂಬಿಕೊಂಡು, ನಾನಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಖರ್ಗೆ ಅವರ ಹೇಳಿಕೆ ಎಲ್ಲಾ ಪ್ರಯತ್ನಗಳನ್ನು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆ ಮಾಡಿದೆ.
ಈ ಮೊದಲು ದೆಹಲಿಗೆ ಕರೆಸಿ ಮಾತನಾಡುವುದಾಗಿ ಹೇಳಿದ್ದ ಖರ್ಗೆಯವರು ಇದ್ದಕ್ಕಿದ್ದ ಹಾಗೇ ಉಲ್ಟಾ ಹೊಡೆದಿದ್ದು ಏಕೆ ಎಂಬ ಅನುಮಾನಗಳು ಕಾಡುತ್ತಿವೆ. ಸಿದ್ದರಾಮಯ್ಯ ಅಹಿಂದ ವರ್ಗದ ಪ್ರಬಲ ನಾಯಕ. ಅವರ ವಿರುದ್ಧ ಯಾವುದೇ ನಿರ್ಣಯ ಕೈಗೊಂಡರೂ ಅದು ಅಪಾಯಕ್ಕೆ ಎಡೆ ಮಾಡಿಕೊಡಲಿದೆ ಎಂಬ ಭಯ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆಯೇ ? ಅಥವಾ ಡಿ.ಕೆ.ಶಿವಕುಮಾರ್ ಪಕ್ಷದ ನಿಷ್ಠರು ಅವರು ಎಲ್ಲಿಗೂ ಹೋಗುವುದಿಲ್ಲ ಎಂಬ ಉಡಾಫೆಯೇ? ಎಂಬ ಚರ್ಚೆಗಳಿವೆ.
ಕಾಂತ್ರಿ ಮುಗಿದಿದೆ ಎಂದ ಸಿದ್ದರಾಮಯ್ಯ:
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆಪ್ಟೆಂಬರ್, ನವೆಂಬರ್ ಕ್ರಾಂತಿ ಎಂಬುದು ಮುಗಿದುಹೋಗಿದೆ. ಇನ್ನು ಅದ್ಯಾವುದು ಚರ್ಚೆಯಲಿಲ್ಲ. ಎಲ್ಲವೂ ಸುಖಾಂತ್ಯ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಪರೋಕ್ಷವಾಗಿ ತಳ್ಳಿ ಹಾಕಿದ್ದಾರೆ.
ಮುಖ್ಯಮಂತ್ರಿಯಾಗಿ ತಾವೇ ಮುಂದುವರೆಯುವುದಾಗಿ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಪರೋಕ್ಷ ಸೂಚನೆ ನೀಡಿದ್ದರು.ಈಗ ಕ್ರಾಂತಿ ಮುಗಿದು ಹೋಗಿದೆ ಎಂದು ಹೇಳುವ ಮೂಲಕ ಎಲ್ಲಾ ಚರ್ಚೆಗಳಿಗೂ ತೆರೆ ಎಳೆತಯವ ಪ್ರಯತ್ನ ಮಾಡಿದ್ಧಾರೆ. ಅದಕ್ಕೆ ಪೂರಕವಾಗಿ ಖರ್ಗೆ ಅವರ ಹೇಳಿಕೆ ಸಮೀಕರಣಗೊಳ್ಳುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗಿದೆ. ಯಾವುದೇ ಗೊಂದಲಗಳಿದ್ದರೂ, ಬಗೆ ಹರಿಸಲು ಸಮರ್ಥವಾಗಿದೆ ಎಂದು ಕಾಂಗ್ರೆಸ್ ನಾಯಕರು ಪದೇಪದೇ ಹೇಳಿಕೊಳ್ಳುತ್ತಿದ್ದರು. ಈಗ ಖರ್ಗೆ ಅವರ ಮಾತುಗಳು ಹೈಕಮಾಂಡ್ ಸಾಮರ್ಥ್ಯವನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಪಕ್ಷದ ಅಧ್ಯಕ್ಷರಿಗಿಂತಲೂ ಪ್ರಬಲವಾದ ಹೈಕಮಾಂಡ್ ನಾಯಕತ್ವ ಇನ್ಯಾರದು ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಗಾಂಧಿ ಕುಟುಂಬದವರನ್ನೇ ಹೈಕಮಾಂಡ್ ಎಂದು ಅಘೋಷಿತವಾಗಿ ನಂಬಲಾಗಿದೆ.
ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ ಏವ್ಯಕ್ತಿಯ ಹೈಕಮಾಂಡ್ ನಾಯಕತ್ವ ಇತ್ತು. ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗಲೂ ಸೋನಿಯ ಗಾಂಧಿಯವರೇ ಹೈಕಮಾಂಡ್ ಎಂಬಂತೆ ಬಿಂಬಿಸಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಹೈಕಮಾಂಡ್ ಎಂದರೆ ಯಾರು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುತ್ತಲೇ ರಾಹುಲ್ ಗಾಂಧಿ ಹೇಳಿದಂತೆ ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೈಕಮಾಂಡ್ ನಾಯಕರು ಎಂದು ಪರಿಗಣಿಸದಿರುವಂತೆ ಕಂಡು ಬರುತ್ತಿದೆ. ರಾಜಕಾರಣದ ಗೊಂದಲಗಳಿಗೆ ವರಿಷ್ಠರು ಪರಿಹಾರ ಸೂಚಿಸುತ್ತಾರೆ ಎಂದು ಕಾದು ಕುಳಿತಿದ್ದ ರಾಜ್ಯದ ನಾಯಕರಿಗೆ ಈಗ ವರಿಷ್ಠರಲ್ಲೇ ಗೊಂದಲಗಳಿರುವ ಅನುಮಾನ ಕಾಡುತ್ತಿದೆ.
