ಬೆಂಗಳೂರು, ಸೆ.10- ನಗರದ ಕಡು ಬಡವರ ಅನ್ನಪೂರ್ಣೇಶ್ವರಿ ಎಂದೇ ಗುರುತಿಸಿಕೊಂಡಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರ ಜನ ತಿನ್ನಲು ಯೋಗ್ಯವಾಗಿಲ್ಲವೇ ಹಾಗಾದರೆ ಕ್ಯಾಂಟೀನ್‌ಗಳನ್ನು ಬಂದ್ ಮಾಡಲಾಗುವುದೇ ಎಂದು ಅನುಮಾನ ಎಲ್ಲರನ್ನೂ ಕಾಡತೊಡಗಿದೆ. ಸ್ವತಃ ಆಯುಕ್ತರೇ ಇಂದಿರಾ ಕ್ಯಾಂಟಿನ್‌ಗೆ ದಿಢೀರ್ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿ ನೀಡುವ ಆಹಾರ ಗುಣಮಟ್ಟ ನೋಡಿ ಹೌಹಾರಿದ್ದಾರಂತೆ ಮಾತ್ರವಲ್ಲ, ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಪಶ್ಚಿಮ ವಿಭಾಗದ ನಗರ ಪಾಲಿಕೆ ಅಯುಕ್ತ ಕೆ.ವಿ.ರಾಜೇಂದ್ರ ಅವರು ಎಚ್ ಎಂ ಟಿ ವಾರ್ಡನ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದ್ದರು. ಆಗ ಅಲ್ಲಿನ ಅಹಾರ ಕಳಪೆಯಾಗಿರುವುದು ಪತ್ತೆಯಾಗಿತ್ತಂತೆ. ತಿಂಡಿ ತಿನೋದಿಕ್ಕೆ ಅಗಲ್ವಂತೆ ಇಡ್ಲಿ ರಬ್ಬರ್ ತರ ಇದೆಯಂತೆ..ಸಾಂಬಾರನಲ್ಲಿ ತರಕಾರಿಯೇ ಕಾಣಲ್ವಂತೆ. ಇನ್ನೂ ಚಟ್ನಿ ಅಂತು ನೀರಿನ ತರ ಇತ್ತಂತೆ. ಇದರ ಜೊತೆಗೆ ಸ್ವಚ್ಚತೆ ಇಲ್ಲದಿರುವುದು ಕಂಡು ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ಹಿಂದೆ ಕೂಡ ಕ್ಯಾಂಟೀನ್ ಊಟ ಸರಿ ಇಲ್ಲ ಅಂತ ಕೆಲವು ಮಾಧ್ಯಮಗಳು ವರದಿ ಮಾಡಿದ್ದವರು. ಇದಕ್ಕೆ ಪುಷ್ಟಿ ಎಂಬಂತೆ ಇದೀಗ ಖುದ್ದು ಅಯುಕ್ತರೆ ರಿಪೋರ್ಟ್ ನೀಡಿರುವುದರಿಂದ ಅಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸುವಂತಿದೆ.
ಸದ್ಯ ಅಲ್ಲಿನ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡ್ತಿರೋ ಗುತ್ತಿಗೆದಾರನಿಗೆ ಶೋಕಾಸ್ ನೋಟೀಸ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೋಕಾಸ್ ನೋಟೀಸ್ ತಲುಪಿದ ಎರಡು ದಿನಗಳಲ್ಲಿ ಉತ್ತರ ನೀಡುವಂತೆ ತಿಳಿಸಲಾಗಿದೆ. ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರು ಶೋಕಾಸ್ ನೋಟೀಸ್‌ಗೆ ಉತ್ತರ ನೀಡಿದ ನಂತರ ಇಂದಿರಾ ಕ್ಯಾಂಟೀನ್‌ಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ.