ವ್ಯಾಟಿಕನ್‌ಸಿಟಿ,ಏ.21- ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ರೈಸ್ತ ಧರ್ಮದ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ (88) ಅವರು ತಮ್ಮ ನಿವಾಸದಲ್ಲಿಂದು ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಿಗ್ಗೆ 7:35ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಅವರ ನಿಧನದ ಸುದ್ದಿ ತಿಳಿದು ಪ್ರಪಂಚದಾದ್ಯಂತ ಕೋಟ್ಯಂತರ ಕ್ಯಾಥೋಲಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಫ್ರಾನ್ಸಿಸ್ ಪೋಪ್‌ಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಅವರ ಸ್ಥಿತಿ ಸ್ಥಿರ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಪೋಪ್ ಸ್ಥಿತಿ ಗಂಭೀರವಾಗಿದೆ ಎಂದು ನಿನ್ನೆ ಸಂಜೆ ವ್ಯಾಟಿಕನ್ ಪ್ರಕಟಣೆಯಲ್ಲಿ ತಿಳಿಸಿತ್ತು.
ಪೋಪ್ ಫ್ರಾನ್ಸಿಸ್ ಕಳೆದೊಂದು ವಾರದಿಂದ ಶ್ವಾಸಕೋಶ ಸಂಬಂಧಿತ ಸೋಂಕಿನಿಂದ ಬಳಲುತ್ತಿದ್ದರು. ಫೆಬ್ರವರಿ 14 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದರು.
ಕಳೆದ ವಾರ ಸೇಂಟ್ ಪೀಟರ್ಸ್ ಚೌಕ್‌ನಲ್ಲಿ ಕ್ಯಾಥೋಲಿಕ್ ಚರ್ಚ್ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನಾರೋಗ್ಯದ ಕಾರಣ ಪೋಪ್ ಫ್ರಾನ್ಸಿಸ್ ಅವರಿಗೆ ಸಾಧ್ಯವಾಗಿರಲಿಲ್ಲ. ನಿಗದಿಯಾಗಿದ್ದ ಅನೇಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿತ್ತು.