ಬೆಂಗಳೂರು, ಜ.4- ವಿದ್ಯುತ್, ಇಂಧನ, ಹಾಲು, ನೀರು, ಬಸ್ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳ ಶುಲ್ಕ ಹೆಚ್ಚಳದ ಬಿಸಿ ಸಿಲಿಕಾನ್ ಸಿಟಿ ಜನರಿಗೆ ತಟ್ಟಲಿದೆ.ಹೌದು ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗದ ಸ್ಥಿತಿ ಇರುವುದರಿಂದ ನಾವು ಅನಿವಾರ್ಯವಾಗಿ ಶಾಲಾ ಶುಲ್ಕ ಹೆಚ್ಚಳ ಮಾಡಲು ತೀರ್ಮಾನಿಸಿದ್ದೇವೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಇದೇ ಶೈಕ್ಷಣಿಕ ವರ್ಷದಿಂದ ನಾವು ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇ. 10 ರಿಂದ 15 ರಷ್ಟು ಏರಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.ವಿದ್ಯುತ್, ಬಸ್ ದರ ಸೇರಿದಂತೆ ಹಲವು ವಸ್ತಗಳ ಬೆಲೆ ಏರಿಕೆಯಾಗಿದೆ. ನಾವು ಶಾಲೆ ನಡೆಸಬೇಕು, ಶಿಕ್ಷಕರಿಗೆ ಸಂಬಳ ಕೊಡಬೇಕು. ನಮಗೂ ಸಹ ಶಾಲೆ ನಡೆಸೋದು ಕಷ್ಟ ಆಗ್ತಿದೆ ಆದ್ದರಿಂದ ಶುಲ್ಕ ಹೆಚ್ಚಳ ಅನಿವಾರ್ಯ ಎಂದಿದ್ದಾರೆ.
ಬ್ರಾಂಡ್ ಬೆಂಗಳೂರು ಹೆಸರಲ್ಲಿ ಖಾಸಗಿ ಶಾಲೆಗಳ ತೆರಿಗೆಯನ್ನು ಸರ್ಕಾರ ಹೆಚ್ಚಳ ಮಾಡಿದೆ ಅದನ್ನು ನಾವು ಭರಿಸಬೇಕಾದರೆ ಶುಲ್ಕ ಹೆಚ್ಚಳದಿಂದ ಮಾತ್ರ ಸಾಧ್ಯ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.