ಬೆಂಗಳೂರು, ಸೆ.19- ಪ್ರತಿಷ್ಠಿತ ಸಂಸ್ಥೆಗಳು ನಗರವನ್ನು ಖಾಲಿ ಮಾಡುವ ಎಚ್ಚರಿಕೆ ನೀಡಿದ ನಂತರ ಇಲ್ಲಿನ ಗಂಡಾಗುಂಡಿ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯ ಇಂದಿನಿಂದ ಆರಂಭವಾಗಲಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಆದೇಶದಂತೆ ಇಂದಿನಿಂದ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಗುಂಡಿ ಮುಚ್ಚುವ ಕಾರ್ಯ ಶುರುವಾಗಲಿದೆ.ನಗರದಲ್ಲಿ ಇದುವರೆಗೂ ಸಾವಿರಾರು ಗುಂಡಿಗಳು ಪತ್ತೆಯಾಗಿವೆ. ಹೀಗಾಗಿ ಪ್ರತಿ ನಗರ ಪಾಲಿಕೆಯ ಅಯುಕ್ತರ ನೇತೃತ್ವದಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಮಹದೇವಪುರ, ಸರ್ಜಾಪುರ ಮತ್ತು ಬೆಳ್ಳಂದೂರು ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಅ ಪ್ರದೇಶಗಳಲ್ಲಿ ಸದ್ಯ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುವುದು. ಮೆಟ್ರೋ ಕಾಮಗಾರಿ ಮುಗಿದ ನಂತರ ಅಲ್ಲಿನ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡ್ತಿವಿ ಉಳಿದಂತೆ ನಗರದ ಅರ್ಧಭಾಗದ ರಸ್ತೆ ಗುಂಡಿಗಳನ್ನು ಮೂರು ದಿನಗಳಲ್ಲಿ ಮುಚ್ಚುತ್ತೇವೆ ಎಂದು ಮಹೇಶ್ವರ್ ರಾವ್ ಭರವಸೆ ನೀಡಿದ್ದಾರೆ.
ಅಲ್ಲಿಯವರೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಆಯಾ ಪ್ರದೇಶಗಳ ಪ್ರತಿ ರಸ್ತೆಗಳಿಗೆ ಸ್ಥಳೀಯ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಆ ಸಂದರ್ಭದಲ್ಲಿ ತಮಗೆ ಕಂಡು ಬರುವ ಗುಂಡಿಗಳನ್ನು 24 ಗಂಟೆಗಳ ಒಳಗೆ ಮುಚ್ಚಬೇಕು ಎಂದು ಅವರು ತಾಕೀತು ಮಾಡಿದ್ದಾರೆ.
ಗುಂಡಿ ಮುಚ್ಚಿದ ನಂತರ ಅದರ ಛಾಯಾಚಿತ್ರಗಳನ್ನು ಅಯುಕ್ತರ Whatsapp ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಬೇಕು..ಒಂದು ವೇಳೆ ಗುಂಡಿ ಮುಚ್ಚಿಲ್ಲ ಅಂದ್ರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮಹೇಶ್ವರ್ ರಾವ್ ಅವರ ಈ ಎಚ್ಚರಿಕೆ ನಂತರವಾದರೂ ಸ್ಥಳೀಯ ಅಧಿಕಾರಿಗಳು ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸುವೇ ಅಥವಾ ಅದೇ ಉದಾಸೀನ ಭಾವ ಮುಂದುವರೆಸುವರೇ ಎನ್ನುವುದಕ್ಕೆ ಒಂದೆರಡು ದಿನಗಳಲ್ಲಿ ಉತ್ತರ ಸಿಗಲಿದೆ.