ಬೆಂಗಳೂರು, ಜೂ.14- ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದರೆ ರಾಜೀನಾಮೆ ನೀಡುವುದಾಗಿ ನಾನು ಹಾಕಿದ್ದ ಸವಾಲನ್ನು ಪ್ರತಿಸ್ಪರ್ಧಿಗಳು ಸ್ವೀಕರಿಸಿರಲಿಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡುವ ಅಗತ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸವಾಲನ್ನು ಅವರು ಸ್ವೀಕರಿಸಿದರೆ ಈಗಲೂ ನಾನು ರಾಜೀನಾಮೆ ನೀಡಲು ಸಿದ್ಧ. ಪ್ರಶ್ನೆಪತ್ರಿಕೆಯನ್ನೇ ಕೊಡದೆ ಉತ್ತರ ತಪ್ಪಾಗಿದೆ ಎಂದು ಆರೋಪ ಹಾಕುವುದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲಾ ನಡೆಯುತ್ತಿರುತ್ತದೆ. ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಬಿಟ್ಟಾಕಿ ಎಂದು ಹೇಳಿದರು.
ಲೋಕಸಭಾ ಚುನಾವಣೆ ಅಖಾಡದಲ್ಲಿ ನಾನು ಇದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಎಲ್ಲರೂ ಪ್ರದೀಪ್ ಈಶ್ವರ್ ಆಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಮನೆಮನೆ ಸುತ್ತುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ದೊಡ್ಡದು ಎಂದರು.
ಕಾಂಗ್ರೆಸ್ ಪಕ್ಷ ನನ್ನಂತಹ ಅಹಿಂದ ಹುಡುಗನಿಗೆ ಬೆನ್ನುಲುಬಾಗಿರುತ್ತದೆ. ಹೀಗಾಗಿ ಈ ಸಿದ್ಧಾಂತ ನನಗೆ ಇಷ್ಟ ಎಂದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಕಾರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ತಂದಿರಲಿಲ್ಲ. ನಮ ಸರ್ಕಾರ ಅವುಗಳನ್ನು ನಿಲ್ಲಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮಗೆ ಸೋಲಾಗಿಲ್ಲ. ಬದಲಾಗಿ ಗೆಲುವು 5 ವರ್ಷ ಮುಂದೂಡಿಕೆಯಾಗಿದೆ. ಮುಂದಿನ ಅವಧಿಯಲ್ಲಿ ಮತ್ತೆ ನಾವು ಗೆಲ್ಲುತ್ತೇವೆ. ಫಲಿತಾಂಶ ಪ್ರಕಟಗೊಂಡ ಬಳಿಕ ನಮ ಮನೆಯ ಮೇಲೆ ಕಲ್ಲು ತೂರಿದ ಆರೋಪಿಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಮೈಸೂರಿನ ಮೂವರು ಹುಡುಗರು ನಕಲಿ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಪತ್ತೆಯಾಗಿದೆ. ಅವರ ಬಂಧನಕ್ಕೂ ಕಾರ್ಯಾಚರಣೆ ನಡೆಯುತ್ತದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಡಾ.ಕೆ.ಸುಧಾಕರ್ ದೆಹಲಿಯಲ್ಲಿ ಸಂಸದರಾಗಿ ನಾನು ಶಾಸಕನಾಗಿ ಬೆಂಗಳೂರಿನಲ್ಲಿ ಆರಾಮಾಗಿರುತ್ತೇವೆ. ನಮಗೆ ನಮ ಹೆಂಡತಿ, ಮಕ್ಕಳೇ ಮುಖ್ಯ. ಕಾರ್ಯಕರ್ತರು ತಮ ವಿಚಾರದಲ್ಲಿ ತಲೆಕೆಡಿಸಿಕೊಂಡು ಹೊಡೆದಾಡಬಾರದು. ಎಲ್ಲಾದರೂ ಸಿಕ್ಕರೆ ಜೊತೆಯಲ್ಲಿ ತಿಂಡಿ ತಿನ್ನೋಣ. ಅನಗತ್ಯವಾಗಿ ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಕಳೆದ ಒಂದೂವರೆ ವರ್ಷದಿಂದಲೂ ನಾನು ಅತ್ಯಂತ ಸಹನೆಯಿಂದ ಇದ್ದೇನೆ. ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ, ನಾಲ್ಕೈದು ಕಡೆ ದಾಳಿಯಾಗಿದೆ. ಅದಕ್ಕೆಲ್ಲಾ ತಕ್ಷಣ ಪ್ರತಿಕ್ರಿಯಿಸಿದರೆ ನಮ ಕಾರ್ಯಕರ್ತರು ರೊಚ್ಚಿಗೇಳುತ್ತಾರೆ, ಕಾನೂನು ಸುವ್ಯವಸ್ಥೆಗೆ ತೊಡಗಕಾಗುತ್ತದೆ ಎಂಬ ವಿಷಯಕ್ಕೆ ಸುಮನಿದ್ದೇನೆ. ಕಾರ್ಯಕರ್ತರನ್ನು ಗುಂಪುಕಟ್ಟಿಕೊಂಡು ಸುದ್ದಿಗೋಷ್ಠಿ ಮಾಡಿ ನಾನು ಯಾರನ್ನೂ ಟೀಕಿಸುವಂತೆ ಮಾಡುವುದಿಲ್ಲ. ಏನೇ ಇದ್ದರೂ ನಾನು ಒಬ್ಬನೇ ಅಖಾಡಕ್ಕೆ ಇಳಿಯುತ್ತೇನೆ. ಎದುರಿಸುತ್ತೇನೆ ಎಂದು ಹೇಳಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತಾವು ಖಂಡಿಸುತ್ತಿದ್ದು, ಯಾರೇ ತಪ್ಪು ಮಾಡಿದ್ದರೂ ತಕ್ಷ ಶಿಕ್ಷೆಯಾಗಬೇಕು. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ ಎಂದರು.