ಹುಬ್ಬಳ್ಳಿ,ಡಿ.22- ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹುದ್ದೆಗೆ ಅನ್ಫಿಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇರ ಕಾರಣ.
ಭದ್ರತೆ ಒದಗಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂಥವರು ಹುದ್ದೆಯಲ್ಲಿರಲು ಅನ್ಫಿಟ್ ಎಂದು ಕೆಂಡಕಾರಿದರು. ತಾವೊಬ್ಬ ಸಾರ್ವಜನಿಕ ಸೇವೆಯಲ್ಲಿದ್ದೇನೆ ಎಂಬುದನ್ನು ಮರೆತು ವಕ್ತಾರರಂತೆ ನಡೆದುಕೊಂಡಿದ್ದಾರೆ. ಮೊದಲು ಸರ್ಕಾರ ಆಯುಕ್ತ ಯಡಾಮಾರ್ಟಿನ್ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು. ಅವರ ವಿರುದ್ಧ ಕೇಂದ್ರ ಸರ್ಕಾರಕ್ಕೂ ದೂರು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಸುವರ್ಣಸೌಧದಲ್ಲಿ ಸಚಿವರೊಬ್ಬರ ಬೆಂಬಲಿಗರು ಒಳಗೆ ನುಗ್ಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬೆದರಿಕೆ ಹಾಕುತ್ತಾರೆ ಎಂದರೆ ಇದಕ್ಕೆ ಯಾರು ಹೊಣೆ? ಸಭಾಪತಿಯವರು ಇವರನ್ನು ಕರೆದು ಛೀಮಾರಿ ಹಾಕಿ ಸೇವೆಯಿಂದ ಅಮಾನತುಪಡಿಸಬೇಕಿತ್ತು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದವರ ದೂರು ದಾಖಲಿಸಿಕೊಂಡ ಪೊಲೀಸರು, ವಿರೋಧ ಪಕ್ಷದವರ ಕೊಟ್ಟ ದೂರು ದಾಖಲಿಸಿಕೊಂಡಿಲ್ಲ ಏಕೆ? ವಿಧಾನಸೌಧದೊಳಗೆ ನುಗ್ಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದರೂ ಯಾಕೆ ಬಂಧಿಸಿಲ್ಲ? ಪೊಲೀಸ್ ಇಲಾಖೆ ಇರೋದು ಕಾಂಗ್ರೆಸ್ ಕಾರ್ಯಕರ್ತರನ್ನ, ನಾಯಕರನ್ನ ರಕ್ಷಣೆ ಮಾಡಲಾ? ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಾ? ಎಂದು ಪ್ರಶ್ನಿಸಿದರು.
ಬೆಳಗಾವಿ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು. ಓರ್ವ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರನ್ನ ಬಂಧಿಸಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದೀರಿ. ಖಾನಾಪೂರ, ಕಬ್ಬಿನಗದ್ದೆ ಕಡೆ ಕರೆದುಕೊಂಡು ಹೋಗ್ತೀರಿ. ಸಾಲದ್ದಕ್ಕೆ ಈ ವಿಚಾರವಾಗಿ ಕಮಿಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಸದನಕ್ಕೆ ನುಗ್ಗಿ ಹಲ್ಲೆ ನಡೆಸಿದವರನ್ನು ಬಂಧಿಸದೆ, ರಾಜಕೀಯವಾಗಿ ಹೋರಾಟ ಮಾಡಿ, ಕಾನೂನು ಹೋರಾಟ ಮಾಡಿ ಎಂದು ಸಿ.ಟಿ.ರವಿ ಅವರಿಗೆ ಸಲಹೆ ಕೊಟ್ಟಿದ್ದಾರೆ. ಮೊದಲು ಬೆಳಗಾವಿ ಕಮೀಷನರ್ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದರು.
ಸುವರ್ಣಸೌಧದಲ್ಲಿ ನಡೆದ ಘಟನೆ ಬಗ್ಗೆ ತರಾತುರಿಯಲ್ಲಿ ಎಫ್ಐಆರ್ ಹಾಕಿದ್ದಾರೆ. ಕಂಪ್ಲೆಂಟ್ ಕೊಟ್ಟವರು ಸಚಿವರ ಆಪ್ತರು. ಕೊಟ್ಟ ದೂರಿನಲ್ಲಿ ಸಚಿವೆಯ ಸಹಿಯೇ ಇರಲಿಲ್ಲ. ಸಚಿವರ ಆಪ್ತ ಸಹಾಯಕ ಸದನದ ಒಳಗಡೆ ಇದ್ದರಾ? ಕಮೀಷನರ್ಗೆ ಕಾಮನ್ ಸೆನ್‌್ಸ ಬೇಡ್ವಾ? ಬೆಳಗಾವಿ ಕಮಿಷನರ್ ಐಪಿಎಸ್ ಆಗಲು ಆನ್ಫಿಟ್ ಎಂದರು.
ಛಲವಾದಿ ನಾರಾಯಣ ಸ್ವಾಮಿ ಹರಿಜನರು ಎಂದು ಮಾತಾಡಿಸಿಲ್ವಾ ಕಮೀಷನರ್? ಅದೊಂದು ಸಾಂವಿಧಾನಿಕ ಹುದ್ದೆ. ಗೌರವಾನ್ವಿತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಅವರು. ಆದರೆ ಅವರು ಹರಿಜನರು ಅಂತಾ ಅವರನ್ನು ಮಾತನಾಡಿಸಿಲ್ವ? ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.