Sunday, September 8, 2024
Homeರಾಜ್ಯಚರ್ಚೆಗೆ ಗ್ರಾಸವಾಗಿದೆ ಮಹಿಳಾ ಪೊಲೀಸರಿಂದ ಪ್ರಜ್ವಲ್‌ ರೇವಣ್ಣನನ್ನ ಕರೆತಂದ ವಿಚಾರ

ಚರ್ಚೆಗೆ ಗ್ರಾಸವಾಗಿದೆ ಮಹಿಳಾ ಪೊಲೀಸರಿಂದ ಪ್ರಜ್ವಲ್‌ ರೇವಣ್ಣನನ್ನ ಕರೆತಂದ ವಿಚಾರ

ಬೆಂಗಳೂರು, ಮೇ 31-ವಿದೇಶದಿಂದ ಮರಳಿದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಎಸ್‌‍ಐಟಿ ತಂಡವು ಮಹಿಳಾ ಪೊಲೀಸ್‌‍ ಅಧಿಕಾರಿಗಳೊಂದಿಗೆ ಪೊಲೀಸ್‌‍ ವಾಹನದಲ್ಲಿ ಸಿಐಡಿ ಕಚೇರಿಗೆ ಕರೆತಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನ ಬೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು 34 ದಿನಗಳ ಬಳಿಕ ಬಂಧಿಸಲಾಗಿದೆ. ಕಳೆದ ಮಧ್ಯರಾತ್ರಿ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆದ ನಂತರ ಅವರನ್ನು ಮಹಿಳಾ ಅಧಿಕಾರಿಗಳ ಮೂಲಕ ಏಕೆ ಕರೆತರಲಾಯಿತು ಎಂಬುದು ಕುತೂಹಲ ಕೆರಳಿಸಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌‍ಐಟಿ ಕಚೇರಿಗೆ ಜೀಪ್‌ನಲ್ಲಿ ಕರೆತರಲಾಗಿದ್ದು, ಅವರು ಇದ್ದ ಜೀಪ್‌ನಲ್ಲಿ ಚಾಲಕ ಹೊರತುಪಡಿಸಿದರೆ ಉಳಿದವರೆಲ್ಲಾ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದದ್ದು, ಜನರ ಗಮನ ಸೆಳೆದಿದೆ. ಇದರ ಉದ್ದೇಶ ಬೇರೆ ಏನಾದರೂ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಆರೋಪಿ ಬಂಧನದ ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳು ಮುಂಚೂಣಿಯಲ್ಲಿದ್ದದ್ದು, ಗಮನ ಸೆಳೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ವಿರೋಧಿಸಿ ಮಹಿಳೆಯರು ಪ್ರಜ್ವಲ್‌ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪ್ರತಿಭಟನೆಗೆ ಮುಂದಾಗಬಹುದು ಎಂಬ ಉದ್ದೇಶದಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಬಳಸಲಾಗಿದೆ ಎಂಬ ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಪುರುಷ ಆರೋಪಿಯನ್ನು ವಶಕ್ಕೆ ಪಡೆಯುವಾಗ ಇಲ್ಲವೇ ಬಂಧಿಸುವಾಗ ಪುರುಷ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿ ಇರುವುದು ಕಂಡುಬರುತ್ತಿತ್ತು. ಈ ಪ್ರಕರಣದಲ್ಲಿ ಮಾತ್ರ ಪುರುಷ ಪೊಲೀಸರ ಬದಲಾಗಿ ಮಹಿಳಾ ಪೊಲೀಸರು ಇದ್ದದ್ದು, ಅತ್ಯಂತ ವಿಶೇಷ ಎನಿಸಿದೆ.

ಈ ಪ್ರಕರಣದ ತನಿಖೆ ಕೈಗೊಂಡಿರುವುದು ಮಹಿಳಾ ತನಿಖಾಧಿಕಾರಿ. ಹಾಗಾಗಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಬಳಸಿಕೊಂಡಿರಬಹುದು. ಅಲ್ಲದೆ, ತನಿಖಾಧಿಕಾರಿಯೂ ಯಾವುದೇ ಸಿಬ್ಬಂದಿಯೊಂದಿಗೆ ಆರೋಪಿಯನ್ನು ವಶಕ್ಕೆ ಪಡೆಯಬಹುದಾಗಿದೆ. ಆದರೆ, ಮಹಿಳಾ ಆರೋಪಿಯನ್ನು ವಶಕ್ಕೆ ಪಡೆಯುವಾಗ ಮಾತ್ರ ಮಹಿಳಾ ಪೊಲೀಸರು ಇರಬೇಕು ಎಂಬ ನಿಯಮವಿದೆ.

RELATED ARTICLES

Latest News