ಬೆಂಗಳೂರು, ಮೇ 31- ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಮುಂಜಾನೆ ಬಂಧಿಸಿರುವ ಎಸ್‌ಐಟಿ ತೀವ್ರ ವಿಚಾರಣೆಗೊಳಪಡಿಸಿದೆ.ಕಳೆದ 34 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಸಂಸದ ಪ್ರಜ್ವಲ್‌ರವರು ನಿನ್ನೆ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.
ಇಂದು ಬೆಳಿಗ್ಗೆ ಪ್ರಜ್ವಲ್ ತಿಂಡಿ ಸೇವಿಸಿದ ನಂತರ ತೀವ್ರ ವಿಚಾರಣೆಗೊಳಪಡಿಸಿದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
* ಪೆನ್‌ಡ್ರೈವ್‌ನಲ್ಲಿರುವ ಫೋಟೊ, ವಿಡಿಯೋ ನಿಮದೇ?
* ಹಾಗಾದರೆ ಮೊಬೈಲ್‌ನಲ್ಲಿ ಸೆರೆಹಿಡಿದು ಅವುಗಳನ್ನು ಏಕೆ ಮೊಬೈಲ್‌ನಲ್ಲಿ ಏಕೆ ಇಟ್ಟುಕೊಂಡಿದ್ದೀರಿ?
* ಎಷ್ಟು ಮಹಿಳೆಯರ ವಿಡಿಯೋಗಳಿವೆ?
* ಅವರೆಲ್ಲಾ ನಿಮಗೆ ಹೇಗೆ ಗೊತ್ತು?
* ನಿಮ್ಮ ಮೊಬೈಲ್‌ನಲ್ಲಿ ಇರುವ ಅಶ್ಲೀಲ ಚಿತ್ರಗಳು ಹೇಗೆ ಹೊರಗೆ ಬಂದವು?
* ನಿಮ್ಮ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ನೀವೇನಾದರೂ ಅವುಗಳನ್ನು ಕೊಟ್ಟಿದ್ದೀರ?
* ಪೆನ್‌ಡ್ರೈವ್‌ಗಳು ಹೊರಗೆ ಬಂತು ಎಂದು ನಿಮಗೆ ಗೊತ್ತಾಗಿದ್ದು ಯಾವಾಗ?
* ಮುಂದೆ ನೀವೇನು ಮಾಡಿದಿರಿ?
* ಹೊಳೆನರಸೀಪುರ, ಹಾಸನದಲ್ಲಿ ನಿಮಗೆ ಮನೆಗಳಿದ್ದರೂ ಹಾಸನ ಸಂಸದರ ನಿವಾಸದಲ್ಲಿ ನೀವು ಮಲಗುತ್ತಿದ್ದುದು ಏಕೆ?
* ವಿದೇಶಕ್ಕೆ ಹೋಗಿದ್ದು ಏಕೆ?
* ನಾವು ನೋಟೀಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಲಿಲ್ಲ ಏಕೆ?
* ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿ ಪದೇಪದೇ ಕ್ಯಾನ್ಸಲ್ ಮಾಡಿದ್ದು ಏಕೆ?
* ವಿದೇಶಕ್ಕೆ ಯಾರೊಂದಿಗೆ ಹೋಗಿದ್ದಿರಿ?
* ಅಲ್ಲಿ ಎಲ್ಲಿದ್ದಿರಿ?
* ನಿಮೊಂದಿಗೆ ಯಾರ್ಯಾರಿದ್ದರು? ಎಂದು ಸರಣಿ ಪ್ರಶ್ನೆಗಳನ್ನು ಎಸ್‌ಐಟಿ ಅಧಿಕಾರಿಗಳು ಕೇಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
* ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿರುವ ಎಸ್‌ಐಟಿ ಇಂದು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.
* ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಸಿಐಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.