Tuesday, August 5, 2025
Homeರಾಜ್ಯBREAKING : ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು, ನಾಳೆ...

BREAKING : ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು, ನಾಳೆ ಶಿಕ್ಷ ಪ್ರಕಟ

Prajwal Revanna found guilty in rape case,

ಬೆಂಗಳೂರು, ಆ.1- ಕೆ.ಆರ್.ನಗರ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಕುರಿತಂತ ಎಚ್.ಡಿ.ರೇವಣ್ಣ ಅವರ ಪುತ್ರ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಪ್ರಕಟಿಸಿದೆ.ಶಿಕ್ಷೆ ಪ್ರಮಾಣವನ್ನು ನಾಳೆ ಬೆಂಗಳೂರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಪ್ರಕಟಿಸಲಿದ್ದು, ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣಗೆ 10 ವರ್ಷ ಇಲ್ಲವೇ ಜೀವಾವಧಿ ಶಿಕ್ಷೆ ನೀಡುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡಿದ ಅಪರೂಪದ ಪ್ರಕರಣ ಇದಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಯ್ದಿರಿಸಿದ್ಧ ತೀರ್ಪನ್ನು ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅವರು ದೋಷಿ ಎಂದು ತೀರ್ಪು ನೀಡಿದರು. ಆದೇಶ ಹೊರಬೀಳುತ್ತಿದ್ದಂತೆ ಕಟಕಟೆಯಲ್ಲಿ ಕೈಕಟ್ಟಿ ನಿಂತಿದ್ದ ಪ್ರಜ್ವಲ್ ರೇವಣ್ಣ ಕಣ್ಣೀರು ಸುರಿಸಿದರು. ತಕ್ಷಣವೇ ಅವರನ್ನು ಪೊಲೀಸ್ ಬಿಗಿ ಭದ್ರತೆ ನಡುವೆ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು. ಅತ್ಯಾಚಾರಿ ಎಂದು ಸಾರಿ ಹೇಳಿದ ನ್ಯಾಯಾಲಯ ಇಂತಹ ಹೀನ ಕೃತ್ಯ ನಡೆಸಿರುವ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ನಾಗರಿಕ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ತೀರ್ಪು ಪ್ರಕಟಿಸುವ ಮುನ್ನ ನ್ಯಾಯಾಧೀಶರು ಎರಡೂ ಕಡೆಯ ವಾದ, ವಿವಾದವನ್ನು ಪುನಃ ಆಲಿಸಿದರು.
ಪ್ರಜ್ವಲ್ ರೇವಣ್ಣ ಅವರ ತೋಟದ ಮನೆಯಲ್ಲಿ 47 ವರ್ಷದ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು.

ಈ ಸಂಬಂಧ ಸಂತ್ರಸ್ತೆ ಏಪ್ರಿಲ್ 28, 2024 ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ನ್ಯಾಯಾಲಯವು 26 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಬಿಎನ್‌ಸ್ ಸೆಕ್ಷನ್ 376 (2) ಅಡಿ ಮಹಿಳೆಯ ಮೇಲೆ ಹಕ್ಕು ಚಲಾಯಿಸುವ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗಲಾಗಿದೆ. 376 (2) ಅಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, 354 ಲೈಂಗಿಕತೆ ಬೇಡಿಕೆ ಇಡುವುದು. 354 ಮಹಿಳೆಯನ್ನು ವಿವಸ್ತ್ರಗೊಳಿಸುವುದು. 354 ಮಹಿಳೆಯ ಅಶ್ಲೀಲ ದೃಶ್ಯ ಚಿತ್ರೀಕರಿಸುವುದು. 506 ಜೀವ ಬೆದರಿಕೆ, 201 ಸಾಕ್ಷ್ಯನಾಶದ ಅಡಿ ದೋಷಾರೋಪ ಹೊರಿಸಲಾಗಿತ್ತು.

ಏನಿದು ಪ್ರಜ್ವಲ್ ಪ್ರಕರಣ? :
ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಆತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಸೇರಿದ ಫಾರ್ಮ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.

2021ರ ಸುಮಾರಿಗೆ ಕೋವಿಡ್-ಲಾಕ್ ಡೌನ್ ಮಧ್ಯೆ ಇಂತಹ ಮೊದಲ ಘಟನೆ ನಡೆದಿತ್ತು ಎಂದು ವರದಿ ವೈರಲ್ ಆಗಿತ್ತು. 2024ರ ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ಆಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್ ಗಳು ವೈರಲ್ ಆಗಿದ್ದವು.

ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ 2,900 ಕ್ಕೂ ಹೆಚ್ಚು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಪ್ರಜ್ವಲ್ ರೇವಣ್ಣ ಬಗ್ಗೆ ಮನೆಗೆಲಸದಾಕೆ ದೂರು ನೀಡಿರಲಿಲ್ಲ. ಕೆಲಸ ತೊರೆದ ಬಳಿಕ ಲೈಂಗಿಕ ದೌರ್ಜನ್ಯದ ದೃಶ್ಯಗಳು ಲೀಕ್ ಆದ ಮೇಲೆ ಕಳೆದ ವರ್ಷ ದೂರು ದಾಖಲಿಸಿದ್ದರು.ಅಂತಿಮವಾಗಿ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಕೆ.ಆರ್ .ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.

ಮೈಸೂರಿನ ಕೆಆ‌ರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದು, ಈಗಾಗಲೇ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ.

ಅತ್ಯಾಚಾರ ಆರೋಪ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಸಿಐಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು.

RELATED ARTICLES

Latest News