ಬೆಂಗಳೂರು,ಜೂ.4- ಲೋಕಸಭೆ ಚುನಾವಣೆ ವೇಳೆ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ದೇಶದ ಗಮನ ಸೆಳೆದಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಬಿಜೆಪಿ, ಜೆಡಿಎಸ್ ಬೆಂಬಲಿತ ಎನ್‌ಡಿಎ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು 43756 ಮತಗಳ ಅಂತದಿಂದ ಪರಾಭವಗೊಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಜೆಡಿಎಸ್‌ನ ಭದ್ರಕೋಟೆಯಾದ ಹಾಸನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ದಳಪತಿಗಳಿಗೆ ಭಾರೀ ಮರ್ಮಾಘಾತವಾಗಿದೆ. ಮೇಲ್ನೋಟಕ್ಕೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ಆಡಿಯೋ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರಿರುವುದು ಕಂಡುಬಂದಿದೆ.
ಮತದಾನಕ್ಕೂ ಮುನ್ನ ಮೂರು ದಿನ ಹಾಸನ ಸೇರಿದಂತೆ ಬೇರೆ ಬೇರೆ ಕಡೆ ಪ್ರಜ್ವಲ್ ರೇವಣ್ಣಗೆ ಸೇರಿದ ಪೆನ್‌ಡ್ರೈವ್ ಹಂಚಿಕೆಯಾಗಿತ್ತು. ಇದು ಫಲಿತಾಂಶದಲ್ಲಿ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ ಫಲಿತಾಂಶ ನೋಡಿದರೆ ಪ್ರಜ್ಞಾವಂತ ಮತದಾರರು ಜೆಡಿಎಸ್ ಅಭ್ಯರ್ಥಿಯನ್ನು ಪರಾಭವಗೊಳಿಸಿ ಒಂದು ಕಾಲದ ದೇವೇಗೌಡರ ರಾಜಕೀಯ ಎದುರಾಳಿ ದಿವಂಗತ ಪುಟ್ಟಸ್ವಾಮಿ ಗೌಡರ ಮೊಮಗ ಶ್ರೇಯಸ್ ಪಟೇಲ್ ಗೆಲುವಿನ ನಗೆ ಬೀರಿದ್ದಾರೆ.
ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆ ವರೆಗೂ ಇಲ್ಲಿ ಪಕ್ಷದ ವತಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆ ಹುಸಿಯಾಗಿದೆ. ಮತದಾರ ಮನಸು ಮಾಡಿದರೆ ಎಂಥ ತೀರ್ಪು ಹಾಸನ ಫಲಿತಾಂಶವೇ ಸಾಕ್ಷಿಯಾಗಿದೆ.
ಮುಗಿದ ರಾಜಕೀಯ ಭವಿಷ್ಯ:
ದೇವೇಗೌಡರ ನಾಮಬಲದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಉತ್ತುಂಗಕ್ಕೆ ಏರಿದ್ದ ಪ್ರಜ್ವಲ್ ರೇವಣ್ಣ ತನ್ನ ಸ್ವಯಂಕೃತ ಅಪರಾಧದಿಂದಲೇ ರಾಜಕೀಯ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಗೌಡರ ಹೆಸರಿನಲ್ಲೇ ಹಾಸನದಿಂದ ಸ್ಪರ್ಧಿಸಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರಿಗೆ ಸದ್ಯ ಎದುರಾಗಿರುವ ಕಾನೂನಿನ ಕುಣಿಕೆಗಳು ಸಡಿಲವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಅವರ ಮೇಲೆ ದಾಖಲಾಗಿರುವ ಪ್ರಕರಣಗಳು ಇತ್ಯರ್ಥವಾಗಬೇಕಾದರೆ ವರ್ಷಾನುಗಟ್ಟಲೇ ಕಾಯಬೇಕು. ರಾಜಕೀಯದಲ್ಲಿ ಬೆಳೆದು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಪ್ರಜ್ವಲ್ ರೇವಣ್ಣ ಮುಂದೆ ಕತ್ತಲು ಆವರಿಸಿಕೊಂಡಿದೆ.