Monday, July 7, 2025
Homeರಾಜ್ಯಸಚಿವ ಎಂ.ಬಿ.ಪಾಟೀಲ್‌ಗೆ ಪ್ರಕಾಶ್ ರಾಜ್ ತಿರುಗೇಟು

ಸಚಿವ ಎಂ.ಬಿ.ಪಾಟೀಲ್‌ಗೆ ಪ್ರಕಾಶ್ ರಾಜ್ ತಿರುಗೇಟು

ಬೆಂಗಳೂರು, ಜು.7- ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅಲ್ಲಿನ ರೈತರ ಹೋರಾಟಕ್ಕೆ ಸಂಬಂಧಪಟ್ಟಂತೆ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

ದೇವನಹಳ್ಳಿಯ ಹೋರಾಟದ ಬದಲಾಗಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌ ಗೆ ಹೋಗಿ ರೈತರ ಪರವಾಗಿ ಹೋರಾಟ ಮಾಡಲಿ ಎಂದು ಸಚಿವ ಪಾಟೀಲ್‌ರು ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾನು ಅಲ್ಲೆಲ್ಲಾ ಹೋರಾಟಕ್ಕೂ ಬೆಂಬಲ ನೀಡಿದ್ದೇನೆ. ತಮಿಳುನಾಡಿನ ರೈತರು ದೆಹಲಿಯಲ್ಲಿ 100 ದಿನ ಹೋರಾಟ ನಡೆಸಿದಾಗ ಅದರಲ್ಲಿ ಭಾಗವಹಿಸಿದ್ದು ನಾನೇ.

ಪಂಜಾಬ್, ಹರಿಯಾಣ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದಾಗ ಅದರಲ್ಲಿ ಹಾಜರಾಗಿದ್ದೂ ನಾನೇ. ಎಲ್ಲೇ ರೈತರಿಗೆ ಸಮಸ್ಯೆಯಾದರೂ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.
ಈಗ ದೇವನಹಳ್ಳಿಯಲ್ಲಿ ರೈತರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನನ್ನ ಬಗ್ಗೆ ಪ್ರಶ್ನೆ ಮಾಡುವ ಬದಲಾಗಿ ಸಮಸ್ಯೆ ಬಗೆಹರಿಸುವತ್ತ ಗಮನ ಕೊಡಿ. ಮಣಿಪುರದಲ್ಲಿ ಸಮಸ್ಯೆಯಾದರೂ ನಾನು ಹೋಗುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೀಮಿತನಲ್ಲ, ಜನರ ಪಕ್ಷ ಸೇರಿದವನು. ನೀವು ಒಂದು ಪಕ್ಷಕ್ಕೆ ಸೀಮಿತವಾಗಿದ್ದೀರ ಎಂದಿದ್ದಾರೆ.

ಗುಜರಾತಿನಿಂದ ಪ್ರಧಾನಿಯಾಗಿರುವ ಮಹಾಪ್ರಭುವನ್ನು ಅತಿಹೆಚ್ಚು ಪ್ರಶ್ನೆ ಮಾಡಿದವನು ನಾನೇ. ಜನರಿಗೆ ಎಲ್ಲೇ ಸಮಸ್ಯೆಯಾದರೂ ಪ್ರಶ್ನೆ ಮಾಡುವುದು ನನ್ನ ಕರ್ತವ್ಯ ಎಂದಿದ್ದಾರೆ.
ದೇವನಹಳ್ಳಿಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಕಾನೂನಿನ ತೊಡಕಿದೆ. ಅದನ್ನು ಬಗೆಹರಿಸುವ ಸಂಬಂಧ ಜು.15ರಂದು ವಿಷಯ ತಿಳಿಸುವುದಾಗಿ ಹೇಳಿದ್ದಾರೆ. ಅದರತ್ತ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.

ಈ ನಡುವೆ ಕೆಲ ಕಿಡಿಗೇಡಿಗಳು ದೇವನಹಳ್ಳಿಯ ರೈತರ ಬಳಿ ಹೋಗಿ ಎಕರೆಗೆ 3 ಕೋಟಿ ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡಲು ವಿಳಂಬವಾಗುತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ಜೊತೆಗೆ ಇಡೀ ಪ್ರದೇಶವನ್ನು ಹಸಿರು ವಲಯವನ್ನಾಗಿ ಘೋಷಣೆ ಮಾಡಿಸಿ 25 ವರ್ಷ ಜಮೀನನ್ನು ಪರಭಾರೆ ಮಾಡಲು ಸಾಧ್ಯವಾಗದಂತೆ ಮಾಡಿಸುವುದಾಗಿ ಬೆದರಿಸುತ್ತಿದ್ದಾರೆ. ಅವರು ನಿಮಗೆ ಪರಿಚಯವಿದ್ದರೆ ಸ್ವಲ್ಪ ತಿಳಿಹೇಳಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಎಲ್ಲದಕ್ಕೂ ಕಾನೂನಿನಲ್ಲಿ ಪರಿಹಾರವಿದೆ. ನಿಮಗೆ ಪರಿಹಾರ ತಿಳಿಯದೇ ಇದ್ದರೆ ನಮ್ಮ ಬಳಿಗೆ ಬನ್ನಿ. ನಮ್ಮಲ್ಲೂ ಕಾನೂನು ತಜ್ಞರಿದ್ದಾರೆ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ಸಂವಿಧಾನ ತಿಳಿದವರು. ರೈತರ ಪರವಾಗಿ ಐತಿಹಾಸಿಕ ತೀರ್ಪು ನೀಡಿದವರು. ಅವರಿಂದ ನಿಮಗೆ ಸಲಹೆ ಸಿಗುತ್ತದೆ ಎಂದಿದ್ದಾರೆ.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಪ್ರಕಾಶ್‌ ರೈ ಸಲಹೆ ನೀಡಿದ್ದಾರೆ.

RELATED ARTICLES

Latest News