ಬೆಂಗಳೂರು,ಸೆ.6- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬವನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರಿಂದ ಉದ್ಘಾಟನೆ ನೆರವೇರಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ಮತ್ತು ಕನ್ನಡ ವಿರೋಧಿ ಭಾವನೆ ಹೊಂದಿರುವ ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟಿಸಿದರೆ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆ ಬರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ದಸರಾ ಹಿಂದೂಗಳು ಆಚರಿಸುವ ಹಬ್ಬವಾಗಿದೆ. ನಾಡದೇವತೆ ಚಾಮುಂಡೇಶ್ವರಿಗೆ ಕುಂಕುಮಾರ್ಚನೆ ಮಾಡಬೇಕು. ಇಲ್ಲವೇ ಉದ್ಘಾಟನೆ ಮಾಡುವವರು ಹಣೆಗೆ ತಿಲಕ, ಗಂಧದ ಕಡ್ಡಿ ಬೆಳಗುವುದು ಮಂಗಳಾರತಿ ಮಾಡುವುದು ನಮ ಸಂಪ್ರದಾಯವಾಗಿದೆ. ಮೂರ್ತಿ ಪೂಜೆ ವಿರೋಧಿಸುವವರು ದಸರಾ ಉದ್ಘಾಟನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಸ್ವತಃ ಮೈಸೂರಿನ ರಾಜಮನೆತನದ ಕುಟುಂಬದ ಸದಸ್ಯರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾಡದೇವತೆಯನ್ನು ಬಹಿರಂಗವಾಗಿ ವಿರೋಧಿಸುವ ಅವರಿಂದ ಉದ್ಘಾಟನೆ ಮಾಡಿಸುವುದು ಸರಿಯಲ್ಲ. ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಎಂದು ಅರ್ಜಿಯಲ್ಲಿ ಕೋರಿದ್ದಾರೆ.