ಬೆಂಗಳೂರು,ಸೆ.15– ವಿಶ್ವವಿಖ್ಯಾತ ನಾಡಹಬ್ಬ ದಸರಾ ವನ್ನು ಬೂಕರ್ ಪ್ರಶಸ್ತಿ ವಿಜೇತ ಬಾನು ಮುಸ್ತಾಕ್ ಉದ್ಘಾಟಿಸುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ, ಗಿರೀಶ್‌ಕುಮಾರ್ ಮತ್ತು ಗೌರವ್ ಎಂಬುವರು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಬು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಷಿ ನೇತೃತ್ವದ ವಿಭಾಗೀಯ ಪೀಠ ಅರ್ಜಿಯಲ್ಲಿ ಯಾವುದೇ ಕಾನೂನಾತಕ ಅಂಶಗಳಿಲ್ಲ ಎಂದು ವಜಾಗೊಳಿಸಿ ಆದೇಶ ನೀಡಿದೆ.
ವಿಸ್ತೃತ ಆದೇಶವನ್ನು ನಂತರ ನೀಡುವುದಾಗಿ ಹೇಳಿದ ನ್ಯಾಯಪೀಠ, ಬಾನು ಮುಸ್ತಾಕ್ ದಸರಾ ಉದ್ಘಾಟಿಸುವುದರಿಂದ ಯಾರಿಗೆ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಅರ್ಜಿದಾರರಿಗೆ ದಂಡ ವಿಧಿಸಬೇಕೆಂದು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
ವಿಜಯ ದಶಮಿ ಎಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ಈ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಒಳ್ಳೆಯ ಹಬ್ಬ ಮಾಡುವಾಗ ನಾವು ಸಕಾರಾತಕವಾಗಿ ಇರಬೇಕು. ನಕರಾತಕ ಚಿಂತನೆ ಬೇಡ ಎಂದು ನ್ಯಾಯಾಧೀಶರು ಬುದ್ದಿವಾದ ಹೇಳಿ ಅರ್ಜಿಯನ್ನು ವಜಾ ಮಾಡಿದರು.
ಬಾನು ಮುಸ್ತಾಕ್ ಅವರನ್ನು ಕೇವಲ ಧರ್ಮದ ಆಧಾರದ ಮೇಲೆ ನೋಡಬೇಡಿ ನಾಡ ಹಬ್ಬವನ್ನು ಈ ಹಿಂದೆ ಸಾಹಿತಿ ನಿಸಾರ್ ಅಹಮದ್ ಸೇರಿದಂತೆ ಅನೇಕರು ಉದ್ಘಾಟಿಸಿದ್ದಾಗ ಅರ್ಜಿದಾರರು ಏಕೆ ವಿರೋಧ ವ್ಯಕ್ತಪಡಿಸಿರಲಿಲ್ಲ? ಜಾತ್ಯತೀತ ರಾಷ್ಟ್ರದಲ್ಲಿ ಓರ್ವ ವ್ಯಕ್ತಿಯನ್ನು ಧರ್ಮದ ಆಧಾರದ ಮೇಲೆ ನೋಡುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಅಷ್ಟಕ್ಕೂ ಅವರೇ ಉದ್ಘಾಟನೆ ಮಾಡುವುದರಿಂದ ಇಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಹೇಗಾಗುತ್ತದೆ? ಎಂಬುದನ್ನು ಮನವರಿಕೆ ಮಾಡಿ. ಯಾವುದಾದರು ಪೂಜಾರಿಯ ಹಕ್ಕಿನ ಉಲ್ಲಂಘನೆಯಾಗಿದೆಯೇ? ವ್ಯಕ್ತಿಯೊಬ್ಬನ ಹಕ್ಕನ್ನು ಉಲ್ಲಂಘಿಸಿದೆಯೇ? ಇಲ್ಲವೇ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆಯೇ? ದಸರಾ ಹಬ್ಬವನ್ನು ನಿರ್ಧಿಷ್ಟ ಸಮುದಾಯದವರೇ ಉದ್ಘಾಟನೆ ಮಾಡುವ ನಿಯಮವಿದ್ದರೆ ತಿಳಿಸಿ ಎಂದು ಅರ್ಜಿದಾರರಿಗೆ ನ್ಯಾಯಾಧೀಶರು ಸೂಚಿಸಿದರು.
ಇದು ಧಾರ್ಮಿಕ ನಂಬಿಕೆಯ ಭಾವನೆ ಎಂದು ಅರ್ಜಿದಾರರ ಪರ ವಕೀಲರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.ನಿಮ ಅರ್ಜಿಯನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಇಲ್ಲಿ ಯಾವ ವ್ಯಕ್ತಿಯ ಧಾರ್ಮಿಕಹಕ್ಕು ಉಲ್ಲಂಘನೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತೀರ್ಪು ಹೇಳಿ ಅರ್ಜಿಯನ್ನು ವಜಾಗೊಳಿಸಿತು.