ಬೆಂಗಳೂರು, ಮೇ 20- ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ವರುಣನ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ದಾವಣಗೆರೆ, ಉಡುಪಿ, ಕಾರ್ಕಳ, ಕುಂದಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅರ್ಭಟ ಮುಂದುವರೆದಿದ್ದು, ಕೆರೆಕಟ್ಟೆಗಳು ಭರ್ತಿಯಾಗತೊಡಗಿವೆ. ಹೊಲಗದ್ದೆಗಳು ಜಲಾವೃತವಾಗಿವೆ.
ಹಲವೆಡೆ ಮನೆಗಳು ಕುಸಿದು ಬಿದ್ದಿವೆ. ಮಾವು, ಹಲಸು, ಹೂ-ಹಣ್ಣು, ತರಕಾರಿ ಬೆಳೆಗಳು ನಾಶವಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗದ್ದೆಗಳಿಗೂ ನೀರು ನುಗ್ಗಿದ ಪರಿಣಾಮ ಹಣ್ಣು, ತರಕಾರಿ, ಬೆಳೆ ನಾಶವಾಗಿ ರೈತರಿಗೆ ಅಪಾರ ಹಾನಿಯುಂಟಾಗಿದೆ.
ರಾಮನಗರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಕನಕಪುರದ ಮೇಗಳಬೀದಿಯಲ್ಲಿ ಮನೆಯೊಂದು ಕುಸಿದುಬಿದ್ದಿದ್ದು, ಅದೃಷ್ಟವಶಾತ್ ತಾಯಿ-ಮಗಳು ಪಾರಾಗಿದ್ದಾರೆ. ಅತ್ತ ಉತ್ತರಕರ್ನಾಟಕ ಭಾಗದಲ್ಲೂ ಕೂಡ ವರುಣನ ಆರ್ಭಟ ಶುರುವಾಗಿದೆ. ಹಾವೇರಿ, ಕಲಬುರಗಿ, ಗದಗ ಭಾಗದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ.
ಕಲಬುರಗಿಯಲ್ಲಿ ಭಾರೀ ಮಳೆಯಿಂದ ಅಪಾರ ಬೆಳೆಹಾನಿ ಸಂಭವಿಸಿದೆ. ಲಕ್ಷಾಂತರ ಎಕರೆಯಲ್ಲಿದ್ದ ಬಾಳೆ ತೋಟ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ರೈತರು ಅಲವತ್ತುಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ.
ದ.ಕನ್ನಡ, ಉಡುಪಿ, ಕರಾವಳಿ ಭಾಗದ ವಿವಿಧೆಡೆ ಮಳೆ ಸುರಿಯುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಸಿಗರು, ಸಾರ್ವಜನಿಕರು ಕೂಡ ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಇನ್ನೂ ಮೂರು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜಧಾನಿ ಬೆಂಗಳೂರಂತೂ ಅಕ್ಷರಶಃ ನೀರಿನಲ್ಲಿ ಮುಳುಗಿಹೋಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ರಾಜಧಾನಿಯ ಅರ್ಧಭಾಗ ನೀರಿನಿಂದ ಆವೃತವಾಗಿ ಮಳೆಯ ಹೊಡೆತಕ್ಕೆ ಜನ ಹೈರಾಣಾಗಿದ್ದಾರೆ. ಸಂಚಾರಕ್ಕೆ ಅಡಚಣೆಯಾಗಿದೆ. ದಾಖಲೆಯ ಮಳೆಗೆ 50ಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.