ಬೆಂಗಳೂರು, ಏ.30-ಕೊಡಗಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ರಾಜ್ಯದಲ್ಲಿ ನಾಳೆಯಿಂದ ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ಒಂದು ತಿಂಗಳಿನಿಂದಲೂ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಮೈಸೂರು ಜಿಲ್ಲೆಯಲ್ಲೂ ಅರೆವ್ಯಾಪಕ ಪ್ರಮಾಣದ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಡಿ.ಎ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 58.5 ಮಿ.ಮೀ.ನಷ್ಟು ಗರಿಷ್ಠ ಪ್ರಮಾಣದ ಮಳೆಯಾಗಿದೆ. ದಕ್ಷಿಣ ಕನ್ನಡ, ಮಂಡ್ಯ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲಿ ಕೆಲವೆಡೆ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ.
ಬೆಂಗಳೂರು ನಗರ, ಧಾರವಾಡ, ಹಾಸನ, ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ಬೀದರ್, ವಿಜಯನಗರ, ಹಾವೇರಿ, ಚಿಕ್ಕಬಳ್ಳಾಪುರ, ವಿಜಯಪುರ, ಶಿವಮೊಗ್ಗ, ರಾಮನಗರ, ಉಡುಪಿ, ಕಲಬುರಗಿ, ಗದಗ, ಬಳ್ಳಾರಿ, ಕೋಲಾರ, ಯಾದಗಿರಿ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ.
ವಾತಾವರಣದಲ್ಲಿ ಉಂಟಾಗಿರುವ ಕೆಲವೊಂದು ಬದಲಾವಣೆಗಳಿಂದಾಗಿ ರಾಜ್ಯದ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಿಂಚು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳಿವೆ. ಕೆಲವೆಡೆ ಆಲಿಕಲ್ಲು ಹಾಗೂ ಬಿರುಗಾಳಿ ಸಹಿತ ಮಳೆಯಾಗಬಹುದು.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಕರಾವಳಿ, ಮಲೆನಾಡು, ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ. ಸರಾಸರಿ ಇದೇ ರೀತಿ ಮಳೆ ಮುಂದಿನ ಐದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ.