ಬೆಂಗಳೂರು,ಫೆ.2- ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಯಲ್ಲಿ ಅನುಸರಿಸುವ ನಿಯಮ ಬಾಹಿರ ಕ್ರಮಗಳನ್ನು ತಡೆಗಟ್ಟಲು ರೂಪಿಸಲಾಗುವ ಕಾಯ್ದೆ ನ್ಯಾಯಾಲಯದಿಂದ ಅನೂರ್ಜಿತಗೊಳ್ಳದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು ನಾನಾ ರೀತಿಯ ಅಧ್ಯಯನ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಿದ್ದೇವೆ. ಈಗಾಗಲೇ ರೂಪಿಸಲಾದ ಕರಡು ಮಸೂದೆಯಲ್ಲಿ ಕೆಲವು ಸೇರ್ಪಡೆ ಮಾಡಲಾಗಿದೆ. ಇನ್ನೂ ಕೆಲವನ್ನು ತೆಗೆಯಲಾಗಿದೆ. ಇದನ್ನು ಜಾರಿಗೊಳಿಸುವ ಹಂತದಲ್ಲಿ ನ್ಯಾಯಾಲಯಕ್ಕೆ ಹೋಗಿ ತಡೆಯಾಗಬಾರದು ಎಂಬ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದರು.
ಮನಿ ಲಾಂಡ್ರಿಂಗ್ ಕಾಯಿದೆ ಸೇರಿದಂತೆ ಚಾಲ್ತಿಯಲ್ಲಿರುವ ಇತರ ಮಸೂದೆಗಳನ್ನು ಜೋಡಿಸಿ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಲು ಹೇಳಲಾಗಿತ್ತು. ಅಧಿಕಾರಿಗಳು ಶೀಘ್ರದಲ್ಲೇ ಎಲ್ಲಾ ರೀತಿಯ ಚರ್ಚೆಗಳನ್ನು ಮುಗಿಸಿ ರಾಜ್ಯಪಾಲರಿಗೆ ರವಾನಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ದೆಹಲಿಗೆ ಭೇಟಿ ನೀಡುವುದು ಖಚಿತ. ಆದರೆ ಹೈಕಮಾಂಡ್ ಭೇಟಿಗಾಗಲೀ, ರಾಜಕೀಯದ ಚರ್ಚೆಗಾಗಲೀ ಹೋಗುತ್ತಿಲ್ಲ. ಎಐಸಿಸಿಯ ಅಧ್ಯಕ್ಷರು ಇಲ್ಲಿನವರೇ ಆಗಿರುವುದರಿಂದ ಅವರ ಬಳಿ, ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು ಇಲ್ಲಿಗೆ ಬರುತ್ತಾರೆ. ಅವರ ಜೊತೆ ನಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶಗಳಿವೆ ಎಂದರು.
ನವೆಂಬರ್ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದಿಲ್ಲ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಯಾವಾಗಿನಿಂದ ಜ್ಯೋತಿಷ್ಯ ಹೇಳಲು ಪ್ರಾರಂಭಿಸಿದರೋ ಗೊತ್ತಿಲ್ಲ. ಸಿದ್ದರಾಮಯ್ಯ 5 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಅವರನ್ನು ಆಯ್ಕೆ ಮಾಡಿದಾಗ ಯಾವುದೇ ಸಮಯ ನಿಗದಿಪಡಿಸಿರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮತ ಹಾಕಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರು ಎಂದು ಘೋಷಣೆ ಮಾಡಲಾಗಿದೆ. ಹೈಕಮಾಂಡ್ ತಮ ವಿವೇಚನೆ ಆಧರಿಸಿ ಮುಖ್ಯಮಂತ್ರಿ ಆಯ್ಕೆ ಮಾಡಿತ್ತು. ಆ ವೇಳೆ ಎರಡೂವರೆ ವರ್ಷ ಸಿದ್ದರಾಮಯ್ಯ ಇರಲಿ, ಅನಂತರ ಬೇರೆ ಆಲೋಚನೆ ಮಾಡೋಣ ಎಂದು ಹೇಳಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ. ಇದರ ನಡುವೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಭಾರೀ ನಿರಾಶೆ ಮಾಡಿದೆ. ಪ್ರಮುಖವಾದ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅನೇಕ ಪ್ರಸ್ತಾವನೆಗಳನ್ನು ಕೇಂದ್ರದ ಮುಂದೆ ಮಂಡಿಸಲಾಗಿತ್ತು. ಬಡವರಿಗೆ ನಿರ್ಮಿಸುವ ಆಶ್ರಯಮನೆಗಳಿಗೆ ಹೆಚ್ಚಿನ ಹಣ, ಸಮಾಜಕಲ್ಯಾಣ ಇಲಾಖೆಗೆ ಹೆಚ್ಚಿನ ಹಣ ನೀಡಬೇಕು. ಐಐಎಂ, ಐಐಟಿ ಗಾಗಿ ಹೆಚ್ಚಿನ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು.
ನೀರಾವರಿ ಯೋಜನೆಗಳಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ.ಗಳನ್ನು ನಿರ್ಮಲಾ ಸೀತಾರಾಮನ್ ಅವರೇ ಪ್ರಕಟಿಸಿದ್ದರು. ಅದರ ಹಣವನ್ನೂ ಬಿಡುಗಡೆ ಮಾಡಿಲ್ಲ, ಈಗ ಪ್ರಸ್ತಾವನೆಯನ್ನೂ ಮಾಡಿಲ್ಲ. ರಾಷ್ಟ್ರೀಯ ಯೋಜನೆಯ ಕುರಿತು ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ. ಮೇಕೆದಾಟು, ಮಹದಾಯಿಗೆ ಮನವಿ ಸಲ್ಲಿಸಲಾಗಿತ್ತು. ಬೆಂಗಳೂರಿನ ಅಭಿವೃದ್ಧಿಗೂ ಅನುದಾನ ಕೇಳಲಾಗಿತ್ತು. ಯಾವುದನ್ನೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ರಾಜ್ಯಕ್ಕೆ ಕೇಂದ್ರ ಚೊಂಬು ನೀಡಿದೆ ಎಂದರು.