ಬೆಂಗಳೂರು,ಆ.28- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುವ ಮೂಲಕ ವಿವಾದಕ್ಕೀಡಾಗಿರುವ ದರ್ಶನ್ ಮತ್ತು ಆತನ ಸಂಗಡಿಗರನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ.
24ನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಪಡೆದು ದರ್ಶನ್‌ರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗಳು ಚಾಲನೆಯಲ್ಲಿವೆ.ಈ ನಡುವೆ ಜೈಲಿನಲ್ಲಿ ರಾಜಾತಿಥ್ಯ ಪಡೆದು ಕಾನೂನು ಉಲ್ಲಂಘಿಸಿದ ಕಾರಣಕ್ಕಾಗಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ದರ್ಶನ್ ಆರೋಪಿಯಾಗಿದ್ದಾರೆ.
ತನಿಖಾಧಿಕಾರಿಗಳು ನಿನ್ನೆ ದರ್ಶನ್‌ರನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಿದ್ದು, ಇಂದು ಹೆಚ್ಚಿನ ತನಿಖೆ ನಡೆಸುವ ನಿರೀಕ್ಷೆಗಳಿವೆ. ಇದಕ್ಕಾಗಿ ನಿನ್ನೆಯೇ ಸ್ಥಳಾಂತರಗೊಳ್ಳಬೇಕಿದ್ದ ದರ್ಶನ್‌ರನ್ನು ಬೆಂಗಳೂರಿನ ಜೈಲಿನಲ್ಲೇ ಉಳಿಸಲಾಗಿದ್ದು, ಇಂದು ಮಧ್ಯಾಹ್ನ ಬಿಗಿಭದ್ರತೆಯಲ್ಲಿ ಕರೆದೊಯ್ಯುವ ಸಾಧ್ಯತೆಯಿದೆ. ಇದಕ್ಕಾಗಿ ದಾರಿಯುದ್ದಕ್ಕೂ ಪೊಲೀಸ್ ಪಹರೆಯನ್ನು ನಿಯೋಜಿಸಲಾಗಿದೆ.
ಇತ್ತ ಬಳ್ಳಾರಿ ಕಾರಾಗೃಹದಲ್ಲಿ ರಾಜಾತಿಥ್ಯದಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಜೈಲಿನ ಕೊಠಡಿಗಳು ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಲಾಗಿದೆ. ಸಿಬ್ಬಂದಿಗಳನ್ನು ಬದಲಾವಣೆ ಮಾಡಿ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ದರ್ಶನ್ ಭದ್ರತೆಗೆ ಪ್ರತ್ಯೇಕವಾಗಿ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
1824 ರಲ್ಲಿ ಬ್ರಿಟಿಷರು ನಿರ್ಮಿಸಿದ ಬಳ್ಳಾರಿಯ ಜೈಲಿನಲ್ಲಿ 385 ಖೈದಿಗಳಿದ್ದಾರೆ. ಅದರಲ್ಲಿ ಕೆಲವು ನಟೋರಿಯಸ್ ಹಾಗೂ ಕುಖ್ಯಾತಿ ಗಳಿಸಿದವರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಜೈಲಿನಲ್ಲಿ ಆರಾಮಾಗಿ ಅಡ್ಡಾಡಿಕೊಂಡು, ಚೇರು, ಟೇಬಲ್ಲು, ಕಾಫಿ ಮತ್ತು ಬೆಡ್ಡು, ಮೊಬೈಲು ಎಲ್ಲಾ ಸೌಲಭ್ಯಗಳನ್ನೂ ಪಡೆದುಕೊಂಡು ಸುಖಾಸೀನ ಸೌಲಭ್ಯ ನಡೆಸುತ್ತಿದ್ದ ದರ್ಶನ್‌ಗೆ ಕೆಲವು ರೌಡಿಗಳು ಆತಿಥ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿಗೆ ಬಂದ ಆರೋಪಿಯನ್ನು ಬಂಧೀಖಾನೆಯ ಮಾರ್ಗಸೂಚಿಯ ಅನುಸಾರ ನಡೆಸಿಕೊಳ್ಳುವ ಬದಲಾಗಿ ರಾಜಾತಿಥ್ಯ ನೀಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ಜೈಲಿನಲ್ಲಿ ರೌಡಿಗಳ ಜೊತೆ ದರ್ಶನ್ ಲಾನ್‌ನಲ್ಲಿ ಕುಳಿತು ಟೀ, ಸಿಗರೇಟ್‌ನೊಂದಿಗೆ ಚರ್ಚೆ ನಡೆಸುತ್ತಿರುವುದು ಜೈಲಿನ ಲೋಪದೋಷಗಳನ್ನು ಅನಾವರಣಗೊಳಿಸಿದ್ದವು. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವವರನ್ನು ಶಿವಮೊಗ್ಗ, ಮೈಸೂರು, ಧಾರವಾಡ, ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಿಗೆ ಸ್ಥಳಾಂತರಿಸಲಾಗುವುದು.