ಬೆಂಗಳೂರು, ಅ.30- ಕಂಠೀರವ ಕ್ರೀಡಾಂಗಣದಲ್ಲಿ ಈ ಬಾರಿಯ 70ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಚೆನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ವರ್ಷ 1700 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಸರ್ಕಾರಿ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಮೊದಲಿನಿಂದಲೂ ಶಿಕ್ಷಣ ಇಲಾಖೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಮಕ್ಕಳ ಜೊತೆ ಪೋಷಕರಿಗೂ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ವರ್ಷ ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದೆವು. ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ಸಹ ಪಾಲ್ಗೊಳ್ಳುತ್ತಾರೆ. ರಾಜ್ಯದಲ್ಲಿ 800 ಕೆಪಿಎಸ್ಸಿಶಾಲೆಗಳು ಇವೆ. ಗ್ರಾಮೀಣ ಭಾಗದ ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಎಲ್ಲಾ ತರಹದ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚು ದಾಖಲಾತಿ ಅಭಿಯಾನ ಆಗಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಂಶ ಬರುವಂತೆ ತಯಾರಿ ಮಾಡಿದ್ದೇವೆ. ಮಕ್ಕಳಿಗೆ ಗುಣಾತಕ ಶಿಕ್ಷಣ ಸಿಗಬೇಕು. ಶಾಲಾ ಮಕ್ಕಳು ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ಮಹತ್ವದ ಘೋಷಣೆಗಳನ್ನು ನವೆಂಬರ್ ಒಂದರಂದ ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ನವೆಂಬರ್ ಒಂದರಂದು ಬೆಳಿಗ್ಗೆ 9.30ಗಂಟೆಗೆ ಧ್ವಜಾರೋಹಣ ಮಾಡಲಾಗುತ್ತದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ತೇರ್ಗಡೆಯ ಅಂಕ ಇಳಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬರೆದಿರುವ ಪತ್ರ ಇನ್ನೂ ನನಗೆ ತಲುಪಿಲ್ಲ. ಮಾಧ್ಯಮದಲ್ಲಿ ಅವರು ಬರೆದ ಪತ್ರ ನೋಡಿದ್ದೇನೆ. ಶಿಕ್ಷಣದಲ್ಲಿ ಕೆಲ ಬದಲಾವಣೆ ತರುವ ವಿಚಾರವಾಗಿ ದುಂಡು ಮೇಜಿನ ಸಭೆ ನಡೆಸಲಾಗಿತ್ತು. ಪೋಷಕರು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಒಕ್ಕೂಟದವರ ಜೊತೆ ಚರ್ಚೆ ಮಾಡಿದ್ದೇವೆ. ತೇರ್ಗಡೆಯ ಅಂಕವನ್ನು ಶೇ. 35 ರಿಂದ ಶೇ.33 ಕ್ಕೆ ಇಳಿಕೆ ಮಾಡುವುದರಿಂದ ತುಂಬಾ ಅನುಕೂಲವಾಗಲಿದೆ ಎಂದರು.
ಇದು ಇಲಾಖೆ ಮತ್ತು ನಾವು ಮಾಡಿರುವಂತ ಆದೇಶ ಆಲ್ಲ. ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಆಧಾರದ ಮೇಲೆ ಈ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಬಸವರಾಜ್ ಹೊರಟ್ಟಿ ಕೂಡ ಭಾಗವಹಿಸಿದ್ದರು. ರಾಜ್ಯದಲ್ಲಿ ನಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 33 ಸಾವಿರ ಖಾಯಂ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಇತ್ತೀಚೆಗೆ ಟಿಇಟಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 51 ಸಾವಿರ ಶಿಕ್ಷಕರ ಕೊರತೆ ಇದೆ. ಹೀಗಾಗಿ ಅತಿಥಿ ಶಿಕ್ಷಕರನ್ನ ಕೂಡ ನೇಮಕ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.
ಹಾಲಿ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಾಲಿ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯ ಮಾಡಲಾಗಿದ್ದು, ಐದು ವರ್ಷದೊಳಗೆ ಹಾಲಿ ಶಿಕ್ಷಕರು ಟಿಇಟಿ ಪರೀಕ್ಷೆ ಪಾಸ್ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ. ಇದು ದೇಶಾದ್ಯಂತ ಇರುವ ಶಾಲೆಗಳಿಗೆ ಅನ್ವಯಿಸಲಿದೆ. ನಮ ರಾಜ್ಯದಲ್ಲಿ ಟಿಇಟಿ ವಿರೋಧಿಸಿ ಶಿಕ್ಷಕರ ಸಂಘ ದೆಹಲಿ ಚಲೋ ಹಮಿಕೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
