ಬೆಂಗಳೂರು,ನ.29– ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಈಗ ಕಾಂಗ್ರೆಸ್ ತೆರೆಮರೆಯಲ್ಲಿ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ ಹಿರಿಯ ಸಚಿವರು ಹಾಗೂ ಮುಖಂಡರು ಸರ್ಕಾರದ ವರ್ಚಸ್ಸು ಹೆಚ್ಚಿರುವಾಗಲೇ ಬಿಬಿಎಂಪಿ ಚುನಾವಣೆ ನಡೆಸಿದರೆ ಒಳಿತು ಎಂಬ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಚುನಾವಣೆಗೆ ತಯಾರಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಸಿದರೆ ಗೆಲುವು ಸಾಧಿಸಬಹುದು.
ಶೇ.50ರಷ್ಟು ಫಲಾನುಭವಿಗಳು ನಗರದಲ್ಲಿದ್ದಾರೆ. ಇದರ ಬಗ್ಗೆ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಡ ಹಾಕಲಾಗಿದೆ.
ಇದರಿಂದಾಗಿ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ವ್ಯಾಪಕ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಿರುವ ಮುಖಂಡರು ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹೊಸ ತಂತ್ರಗಾರಿಕೆ ಹೆಣೆಯಲಾಗಿದೆ.
ಈಗಾಗಲೇ ಬಿಜೆಪಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನಾಯಕರ ನಡುವೆ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಮಾಜಿ ಸದಸ್ಯರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲು ಸಿದ್ದರಾಗಿದ್ದಾರೆ. ಅಂಥವರನ್ನು ಸೇರಿಸಿಕೊಂಡು ಚುನಾವಣೆ ಎದುರಿಸಲು ಮೇಗಾ ಪ್ಲಾನ್ ಮಾಡಲಾಗಿದೆ. ಒಟ್ಟಾರೆ ಗ್ಯಾರಂಟಿ ಯೋಜನೆಗಳಿಂದ ಜನರು ನಮ ಸರ್ಕಾರದ ಪರವಾಗಿದ್ದಾರೆ ಎಂಬ ಮಾಹಿತಿಯನ್ನು ಪಡೆದು ಈಗ ಬಿಬಿಎಂಪಿಗೆ ಚುನಾವಣೆ ನಡೆಸಲು ಸದ್ದಿಲ್ಲದೆ ತಯಾರಿಗಳು ನಡೆಯುತ್ತಿವೆ.