ಮಂಡ್ಯ,ಡಿ.17- ಸಕ್ಕರೆನಾಡು ಮಂಡ್ಯದಲ್ಲಿ ಕನ್ನಡ ಕಂಪು ಹರಡಿದ್ದು, 30 ವರ್ಷದ ಬಳಿಕ ಅಕ್ಷರ ಜಾತ್ರೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.ಹಿಂದೆಂದೂ ಕಾಣದಂತಹ ವೈಭವದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಬೃಹತ್ ಸಭಾಂಗಣ ನಿರ್ಮಿಸಿದ್ದು, ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗಿದ್ದು, ಸ್ವಾಗತ ಕಮಾನನ್ನು ವಿಶ್ವವಿಖ್ಯಾತ ಕೃಷ್ಣ ರಾಜಸಾಗರ ಅಣೆಕಟ್ಟಿನ ಮಾದರಿಯಲ್ಲಿ ರಚಿಸಲಾಗಿದೆ.
ನಗರದ ರಸ್ತೆಗಳಲ್ಲಿ ಕನ್ನಡ ಬಾವುಟಗಳು, ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದ್ದು, ಸಾಹಿತ್ಯ ಸಮೇಳನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.ಇದೇ 20 ರಿಂದ 22ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ವೈಭವದ ಸಾಹಿತ್ಯ ಸಮೇಳನಕ್ಕೆ ರಾಜ್ಯದ ನಾನಾಕಡೆಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಧಾನ ವೇದಿಕೆಯ ದ್ವಾರದ ವಿನ್ಯಾಸವು 40 ಅಡಿ ಎತ್ತರ, ಬರೋಬ್ಬರಿ 300 ಅಡಿ ಅಗಲವಾಗಿದ್ದು, ಎಲ್ಲರನ್ನೂ ಸೆಳೆಯುತ್ತಿದೆ.ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದ ಮಾದರಿಯಲ್ಲಿಯೇ ಪ್ರವೇಶವನ್ನು ಕಲ್ಪಿಸಲಾಗಿದ್ದು, ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ.
ಮರ, ಕಬ್ಬಿಣದ ಸರಳುಗಳು, ಥರ್ಮಾಕೋಲ್, ಪಿಒಪಿ ಸೇರಿದಂತೆ ಮುಂತಾದ ಸಾಮಗ್ರಿಗಳನ್ನು ಬಳಸಿಕೊಂಡು ಸುಮಾರು 45 ಕಲಾವಿದರು ಹಾಗೂ ತಂತ್ರಜ್ಞರ ತಂಡ ಇದನ್ನು ವಿನ್ಯಾಸಗೊಳಿಸಿದೆ ಎಂದು ಇದರ ಉಸ್ತುವಾರಿ ವಹಿಸಿದ್ದ ಕಲಾವಿದ ಮಹದೇವ್ ತಿಳಿಸಿದ್ದಾರೆ.ಪ್ರವೇಶದ್ವಾರಕ್ಕೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರು ಇಡಲಾಗಿದೆ.
ಪ್ರಧಾನ ವೇದಿಕೆಗೆ ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿದ್ದು, ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.ಸಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಮತ್ತು ಕ.ಸಾ.ಪ. ಲಾಂಛನವನ್ನು ಅಳವಡಿಸಲಾಗಿದೆ.
ಸುಮಾರು 40 ಸಾವಿರ ಸಭಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಕಾಣಲೆಂದು ಸುಮಾರು ಎಂಟು ಅಡಿ ಎತ್ತರದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ.ಇದಲ್ಲದೆ ಎಡ ಹಾಗೂ ಬಲಭಾಗದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಕನ್ನಡ ಬಾವುಟ, ಛತ್ರ, ಚಾಮರಗಳು ಮೆರುಗು ನೀಡಿವೆ.
ಪ್ರಧಾನ ವೇದಿಕೆ ಮತ್ತು 2 ಸಮಾನಾಂತರ ವೇದಿಕೆಗಳಿಗೆ ಜರ್ಮನ್ ತಂತ್ರಜ್ಞಾನದ ಟಾರ್ಪಾಲಿನ್ ಮತ್ತು ಹ್ಯಾಂಗರ್‌ರಸ ತಂತ್ರಜ್ಞಾನವನ್ನು ಬಳಸಲಾಗಿದೆ. ಗಾಳಿ, ಬೆಂಕಿ ಮತ್ತು ಬಿಸಿಲನ್ನು ತಡೆದುಕೊಳ್ಳುವ ಈ ಟೆಂಟ್ ಸಾರ್ವಜನಿಕರಿಗೆ ಸುರಕ್ಷತೆ ನೀಡುತ್ತದೆ.
ಇದಲ್ಲದೆ ಬರುವವರಿಗೆ ಸುಮಾರು 24 ಎಕರೆ ಜಾಗದಲ್ಲಿ ವಾಹನಗಳ ನಿಲುಗಡೆ, ಅಡುಗೆ ತಯಾರಿಸಲು ಮತ್ತು ಬಡಿಸಲು 7 ಎಕರೆ ಪ್ರದೇಶವನ್ನು ಮೀಸಲಿರಿಸಲಾಗಿದೆ. 3 ಎಕರೆಯಲ್ಲಿ ಪುಸ್ತಕ ಮಳಿಗೆಗಳನ್ನು ಹಾಗೂ 3 ಎಕರೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಅಳವಡಿಸಲಾಗಿದೆ ಎಂದು ಸಮೇಳನದ ವೇದಿಕೆ ನಿರ್ಮಾಣ ಸಮಿತಿ ಸದಸ್ಯ ಕಾರ್ಯದರ್ಶಿ ಹರ್ಷ ಮಾಹಿತಿ ನೀಡಿದ್ದಾರೆ.
ಬಿಗಿ ಭದ್ರತೆ :
ಸಮೇಳನಕ್ಕೆ ಆಗಮಿಸುವ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವ ಹೊಣೆ ಪೊಲೀಸರ ಮೇಲಿದ್ದು, ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಬಿಗಿಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಜಿ.ಪಂ. ಸಭಾಂಗಣದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮೇಳನಕ್ಕೆ ಆಗಮಿಸುವವರಿಗೆ ಸಂಚಾರ ಮಾರ್ಗದ ಫಲಕಗಳು ಮತ್ತು ನಿರ್ಗಮನ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಬೇಕು. ಜನದಟ್ಟಣೆ ಹೆಚ್ಚಾಗುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಬಂದೋಬಸ್ತ್‌ನಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಗಣ್ಯರ ಭದ್ರತೆಯಲ್ಲಿ ಲೋಪವಾಗದಂತೆ ಗಮನ ಹರಿಸಬೇಕೆಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಹಾಗೂ ವಾಹನಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ವಾಹನಗಳಿಗೆ ಪಾಸ್‌ಗಳನ್ನು ನೀಡಬೇಕು ಮತ್ತು ಯಾವುದೇ ರೀತಿಯ ಟ್ರಾಫಿಕ್ ಜಾಂ ಆಗದಂತೆ ಟೋಯಿಂಗ್ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು.ಪೊಲೀಸ್ ಔಟ್‌ಪೋಸ್ಟ್‌ಗಳು, ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪ್ರತಿ ಅರ್ಧ ಗಂಟೆಗೊಮೆ ಸಾಹಿತ್ಯಪ್ರಿಯರಿಗಾಗಿ ವಿಶೇಷ ಬಸ್ಸುಗಳನ್ನು ನಿಯೋಜಿಸಲಾಗಿದೆ. ಪ್ರತಿ ತಾಲ್ಲೂಕಿಗೆ 15 ಬಸ್‌ಗಳಂತೆ 105 ಬಸ್‌ಗಳು ಪ್ರತಿದಿನ ಸಂಚರಿಸಲಿವೆ. ಇದರಲ್ಲಿ 15 ಬಸ್‌ಗಳು ಉಚಿತವಾಗಿವೆ ಎಂದು ಹೇಳಿದರು.ಆರೋಗ್ಯಕೇಂದ್ರಗಳು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.
ಸಮೇಳನಾಧ್ಯಕ್ಷರ ದರ್ಬಾರ್ ರಥ :
87ನೇ ಅಖಿಲ ಭಾರತ ಸಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲು ಅರಮನೆ ದರ್ಬಾರ್ ಮಾದರಿಯಲ್ಲಿ ಸಿಂಹಾಸನ ಒಳಗೊಂಡ ಭವ್ಯ ರಥವನ್ನು ಸಿದ್ಧಪಡಿಸಲಾಗಿದೆ.
ಸಮೇಳನಾಧ್ಯಕ್ಷ ಗೊ.ರೂ.ಚನ್ನಬಸಪ್ಪ ಅವರನ್ನು ಎಲ್ಲರಿಗೂ ಕಾಣುವಂತೆ ರಥದ ಮಧ್ಯಭಾಗದಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಸಿಂಹಾಸನದ ಮೇಲೆ ಕೂರಿಸಲಾಗುವುದು ಮತ್ತು ವಿವಿಧ ರೀತಿಯಲ್ಲಿ ರಥವನ್ನು ಅಲಂಕರಿಸಲಾಗುವುದು. ಇದು ಪ್ರಮುಖ ಆಕರ್ಷಣೆಯಾಗಲಿದೆ ಎಂದು ಕ.ಸಾ.ಪ ಅಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು.
ಲಾರಿ ಚಾರ್ಸಿಯನ್ನು ಬಳಸಿಕೊಂಡು ಈ ಭವ್ಯರಥವನ್ನು ನಿರ್ಮಿಸಲಾಗಿದ್ದು, ಸುಮಾರು 88 ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ತಮಿಳುನಾಡು, ಮಧ್ಯಪ್ರದೇಶ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಿಂದ ಕಲಾವಿದರು ಆಗಮಿಸಲಿದ್ದಾರೆ. ಸುಮಾರು 10 ಸ್ತಬ್ಧ ಚಿತ್ರಗಳು, ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಅಂಡ್ ಗೈಡ್ಸ್ , ಭಾರತ ಸೇವಾದಳ, ಅಶ್ವದಳ, 5 ಟಾಂಗಾಗಳು ಸೇರಿದಂತೆ ಸಾವಿರಾರು ಜನ ಕಾಣಿಸಿಕೊಳ್ಳಲಿದ್ದಾರೆ ಎಂದು ಮೆರವಣಿಗೆ ಸಮಿತಿ ಸಂಚಾಲಕ ಕೀಲಾರ ಕೃಷ್ಣೇಗೌಡ ತಿಳಿಸಿದ್ದಾರೆ.
ಇದಲ್ಲದೆ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಜೋಡೆತ್ತಿನ ಬಂಡಿಗಳು, ಆಟೋರಿಕ್ಷಾಗಳು ಸೇರಿದಂತೆ ನಾಡಪ್ರಭು ಕೆಂಪೇಗೌಡ, ವಿಶ್ವೇಶ್ವರಯ್ಯ, ದೇವಿ ಮಹಾತೆಯ ವೇಷಧಾರಿ ಆಕರ್ಷಣೆ ಇದೆ ಎಂದು ಹೇಳಿದರು.