Wednesday, January 8, 2025
Homeರಾಜ್ಯಪ್ರಯಾಗರಾಜ್‌ ಮಾದರಿಯಲ್ಲಿ ತ್ರಿವೇಣಿಸಂಗಮದಲ್ಲಿ ದಕ್ಷಿಣ ಭಾರತದ ಕುಂಭಮೇಳ, ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ

ಪ್ರಯಾಗರಾಜ್‌ ಮಾದರಿಯಲ್ಲಿ ತ್ರಿವೇಣಿಸಂಗಮದಲ್ಲಿ ದಕ್ಷಿಣ ಭಾರತದ ಕುಂಭಮೇಳ, ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ

preparations for South Indian Kumbh Mela at Triveni Sangam

ತಿ.ನರಸೀಪುರ ಡಿ.31– ದಕ್ಷಿಣ ಕಾಶಿ ಖ್ಯಾತಿಯ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆ.10,11 ಮತ್ತು 12 ರ ಮೂರು ದಿನಗಳ ಕಾಲ ದಕ್ಷಿಣ ಭಾರತದ ಕುಂಭಮೇಳ ನಡೆಯುವ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಕ್ಕೆ ಜಿಲ್ಲಾಧಿಕಾರಿ ಲಕ್ಷಿಕಾಂತ್‌ ರೆಡ್ಡಿ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಉತ್ತರ ಭಾರತದ ಪ್ರಯಾಗರಾಜ್‌ ಮಾದರಿಯಲ್ಲಿ ದಕ್ಷಿಣ ಭಾರತದ ಕುಂಭಮೇಳವನ್ನು ಆಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕುಂಭಮೇಳ ನಡೆಸಲು ಅಂದಾಜು ಪಟ್ಟಿಗಳನ್ನ ತಯಾರಿಸಿ ಎರಡು ದಿನದ ಒಳಗೆ ಜಿಲ್ಲಾಧಿಕಾರಿಗೆ ಕಳಿಸುವಂತೆ ಹಾಗೂ ಸ್ಥಳ ಪರಿಶೀಲಿಸಿ ಕಾರ್ಯಕ್ರಮಗಳ ಸಿದ್ಧತೆಗೆ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಹಿಂದಿನ ಕುಂಭಮೇಳ ಉತ್ಸವಗಳಲ್ಲಿ ತ್ರಿವೇಣಿ ಸಂಗಮದ ಪಾತ್ರದಲ್ಲೇ ಯಜ್ಞ ಯಾಗಾದಿಗಳು, ಹೋಮ ಹವನ ನಡೆಸಲು ಯಾಗಮಂಟಪ, ಧಾರ್ಮಿಕ ಸಭೆ, ಸಮಾರಂಭಗಳನ್ನು ನಡೆಸಲು ವೇದಿಕೆಯನ್ನು ಹಾಕಲಾಗಿತ್ತು. ಮಠಾಧಿಪತಿಗಳ ಹಾಗೂ ಹರಗೂರು ಚರಮೂರ್ತಿಗಳ ವಾಸ್ತವ್ಯಕ್ಕೆ ಕುಟೀರಗಳನ್ನು ನಿರ್ಮಿಸಲಾಗಿತ್ತು.

ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಕಪಿಲಾ ನದಿಯನ್ನು ದಾಟಲು ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಶ್ರೀ ನಡುಹೊಳೆ ಬಸಪ್ಪನ ದರ್ಶನಕ್ಕೆ ಮರಳಿನ ಮೂಟೆಗಳನ್ನು ಹಾಕಿ ಓಡಾಟಕ್ಕೆ ಮಾರ್ಗವನ್ನು ಮಾಡಿಕೊಡಲಾಗಿತ್ತು. ವಿವಿಧ ಇಲಾಖೆಗಳಿಗೆ ಅಗತ್ಯ ಸಿದ್ಧತಾ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರೆ, ತಾಲೂಕು ಮಟ್ಟದ ಅಧಿಕಾರಿಗಳು ವಿವರಗಳನ್ನು ಒದಗಿಸಿದರು.

ನದಿ ತೀರದಲ್ಲಿ ಯಾಗ ಮಂಟಪ, ಧಾರ್ಮಿಕ ಸಮಾರಂಭ :
ತ್ರಿವೇಣಿ ಸಂಗಮದಲ್ಲಿ ಮರಳಿನ ರಾಶಿ ಕಡಿಮೆಯಾಗಿ, ನದಿಯ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಈ ಬಾರಿಯ ಕುಂಭಮೇಳದ ಯಾಗ ಮಂಟಪ ಮತ್ತು ಧಾರ್ಮಿಕ ಸಮಾರಂಭದ ವೇದಿಕೆಯನ್ನು ನದಿ ತೀರದಲ್ಲಿ ಹಾಕುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷಿಕಾಂತ್‌ ರೆಡ್ಡಿ ಸೂಚಿಸಿದರು.

ಪುಣ್ಯ ಸ್ನಾನಕ್ಕೆ ಸೂಕ್ತವಾದ ಏಳೆಂಟು ಸ್ಥಳಗಳನ್ನು ಆಯ್ಕೆ ಮಾಡಿ, ಅಪಾಯವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಕಾಮಗಾರಿಯನ್ನು ನಡೆಸಲು ಸ್ಥಳದಲ್ಲಿಯೇ ಇದ್ದ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್‌ ಕಾರ್ಯ ಪಾಲಕ ಇಂಜಿನಿಯರ್‌ ಅವರಿಗೆ ಸೂಚಿಸಿದರು.

ಅಂದಾಜು ಪಟ್ಟಿ ಸರ್ಕಾರಕ್ಕೆ :
ಮೈಸೂರಿನಲ್ಲಿ ಮಠಾಧೀಶರ ಪ್ರಮುಖದಲ್ಲಿ ಕುಂಭಮೇಳದ ಮೊದಲ ಸಭೆಯ ಬಳಿಕ ತ್ರಿವೇಣಿ ಸಂಗಮದಲ್ಲಿ ಪೂರ್ವ ಸಿದ್ದತೆಗಳನ್ನು ಆರಂಭಿಸಲು ಅಧಿಕಾರಿಗಳಿಂದ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಲು ಭೇಟಿ ಕೊಟ್ಟಿದ್ದೇನೆ. ಯೋಜನಾ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿದ ಬಳಿಕ ಸರ್ಕಾರಕ್ಕೆ ಸಲ್ಲಿಸಿ, ಮಾಧ್ಯಮಗಳಿಗೂ ಮಾಹಿತಿಯನ್ನು ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಲಕ್ಷಿಕಾಂತರೆಡ್ಡಿ ತಿಳಿಸಿದರು.

ಎಸ್ಪಿ ವಿಷ್ಣುವರ್ಧನ್‌, ಡಿವೈಎಸ್‌‍ ರಘು, ಉಪವಿಭಾಗಾಧಿಕಾರಿ ರಕ್ಷಿತ್‌ ಲೋಕೋಪಯೋಗಿ ಇಇ ಜಿ.ರಾಜು, ಎಇಇ ಸತೀಶ್‌, ತಹಶೀಲ್ದಾರ್‌ ಟಿ.ಜಿ.ಸುರೇಶಾಚಾರ್‌, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್‌‍.ಅನಂತರಾಜು, ಕಾವೇರಿ ನೀರಾವರಿ ನಿಗಮದ ಎಇಇ ಎಸ್‌‍.ಮಂಜುನಾಥ್‌, ಸಹಾಯಕ ಇಂಜಿನಿಯರ್‌ ರವೀಂದ್ರ, ಮಾದೇಗೌಡನಹುಂಡಿ ವಿಭಾಗದ ಎಇ ಮಂಜುನಾಥ್‌, ಪೊಲೀಸ್‌‍ ಇನ್‌್ಸಪೆಕ್ಟರ್‌ಗಳಾದ ಮನೋಜ್‌ ಕುಮಾರ್‌, ಧನಂಜಯ್‌‍, ಸಬ್‌ ಇನ್‌್ಸಪೆಕ್ಟರ್‌ ಜಗದೀಶ್‌ ಧೂಳ್‌ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News