ಬೆಂಗಳೂರು, ಜ.9- ವೈಕುಂಠ ಏಕಾದಶಿ ಅಂಗವಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ವೆಂಕಟೇಶ್ವರ ದೇವಸ್ಥಾನಗಳಲ್ಲಿ ವೈಕುಂಠ ದ್ವಾರಗಳನ್ನು ನಿರ್ಮಿಸಲಾಗಿದ್ದು, ಮುಂಜಾನೆ 3 ಗಂಟೆಯಿಂದಲೇ ದೇವರ ದರ್ಶನ ಪ್ರಾರಂಭಗೊಂಡು ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ವಯ್ಯಾಲಿಕಾವಲ್‌ನ ಟಿಟಿಡಿ, ಚಾಮರಾಜಪೇಟೆಯ ಕೋಟೆ ವೆಂಕಟೇಶ್ವರ, ರಾಜಾಜಿನಗರದ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ, ಮಾಗಡಿ ರಸ್ತೆಯ ಎಂಜಿ ರೈಲ್ವೆ ಕಾಲೋನಿಯ ವಿನಾಯಕ ವೆಂಕಟೇಶ್ವರ ದೇವಾಲಯ, ಬಸವನಗುಡಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಕೋಲಾರದ ಚಿಕ್ಕತಿರುಪತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವೈಕುಂಠ ಏಕಾದಶಿ ಪ್ರಯುಕ್ತ 1ಲಕ್ಷ ಲಡ್ಡು ವಿತರಣೆ: ಶರವಣ ಚಾರಿಟೆಬಲ್ ಟ್ರಸ್‌್ಟ ವತಿಯಿಂದ ವೈಕುಂಠ ಏಕಾದಶಿ ಅಂಗವಾಗಿ ಭಕ್ತರಿಗೆ ಒಂದು ಲಕ್ಷ ಲಡ್ಡು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದ ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆರೆೆಯಲಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ ಎಂದರು. ವೈಕುಂಠ ಏಕಾದಶಿಯಂದು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೆಂಕಟೇಶ್ವರ ದೇವರ ದರ್ಶನ ಪಡೆಯಬೇಕು. ಅದಕ್ಕಾಗಿ ತಿರುಪತಿಗೆ ಹೋಗಬೇಕು, ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತರೆಲ್ಲರಿಗೂ ಇರುತ್ತದೆ. ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ತಿರುಪತಿ ಲಡ್ಡು ಮಾದರಿಯಲ್ಲಿ 100ಬಾಣಸಿಗರು ಹಗಲು-ರಾತ್ರಿ ಎನ್ನದೇ ಒಂದು ಲಕ್ಷ ಲಡ್ಡು ತಯಾರಿಸಿದ್ದಾರೆ ಎಂದು ಹೇಳಿದರು.
ಶುದ್ಧ ತುಪ್ಪ, ಗೋಡಂಬಿ, ದ್ರಾಕ್ಷಿ, ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ಲಡ್ಡು ತಯಾರಿಸಲಾಗಿದೆ. ಬೆಂಗಳೂರಿನ ವೆಂಕಟೇಶ್ವರ ದೇವಸ್ಥಾನಗಳಿಗೆ ಲಡ್ಡು ನೀಡಲಾಗಿದೆ. ಈ ದೇವಾಲಯಗಳಿಗೆ ಬಂದ ಭಕ್ತರಿಗೆ ಪ್ರಸಾದವಾಗಿ ಲಡ್ಡು ವಿತರಿಸಲಾಗುವುದು ಎಂದು ಅವರು ಹೇಳಿದರು. ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯ ಎಂದೆಲ್ಲಾ ಭಕ್ತರು ಅವರವರ ಭಕ್ತಿಭಾವನೆಗೆ ತಕ್ಕಂತೆ ಸ್ಮರಣೆ ಮಾಡುತ್ತಾರೆ. ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುವೆಂದರೆ ಮಂಚಾಲೆ ಗಾಘಪ್ಪ ಎಂಬ ನಾಣ್ಣುಡಿಯೇ ಇದೆ. ತಿರುಪತಿ ತಿಮ್ಮಪ್ಪನ ನಂಬಿದ ಭಕ್ತರಿಗೆ ಎಂದೂ ಸಂಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಜನರ ಸಕಲ ಸಂಕಷ್ಟಗಳು ದೂರವಾಗಲಿ, ರೋಗರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.