ಬೆಂಗಳೂರು,ಡಿ.1– ಮುಂದಿನ ಫೆಬ್ರವರಿ ವೇಳೆಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ತಯಾರಿಗಳಾಗುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮತದಾರರ ಪಟ್ಟಿ ಕೂಡ ಸಿದ್ಧಗೊಳ್ಳುತ್ತಿದೆ. ಚುನಾವಣೆಯನ್ನಂತು ನಿಲ್ಲಿಸಲು ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ಮತದಾನದ ಸಾಧ್ಯತೆ ಇದೆ ಎಂದರು.
ಸಚಿವ ಸಂಪುಟ ಪುನರ್ ರಚನೆ ಚರ್ಚೆಯೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಖಾಲಿ ಇದೆ. ಬೆಳಗಾವಿಯ ಅಧಿವೇಶನದ ಬಳಿಕ ಅದನ್ನು ಭರ್ತಿ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ.ಸಂಪುಟ ಪುನರ್ ರಚನೆಯಂತೂ ಸದ್ಯಕ್ಕಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿ ನಡವಳಿಕೆಗಳ ಮೇಲೆ ನಿಗಾ ವಹಿಸಲು ಹೈಕಮಾಂಡ್ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ನಾನು ಈ ಕುರಿತು ವರದಿ ನೀಡುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ನಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂದಿಸಲು ಸಂಘಟನೆಗಳು ಮುಂದೆ ಬಂದಿವೆ. ಇದಕ್ಕಾಗಿ ಅವರಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷದ ಧ್ವಜದಡಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶ ಸಹಜ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಪೂರ್ವ ತಯಾರಿ ಸಹಜ ಎಂದು ಹೇಳಿದರು.
ಬಿಜೆಪಿ ರಾಜಕೀಯ :
ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಕರಣ ದಾಖಲಾಗಿದ್ದಾಗ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿದಾಗ ಬಿಜೆಪಿಯ ಆರ್.ಅಶೋಕ್ ಆಗಲೀ, ಇತರ ನಾಯಕರಾಗಲೀ ಏಕೆ ಧ್ವನಿ ಎತ್ತಲಿಲ್ಲ ಎಂದರು.
ಈ ವಿಚಾರವಾಗಿ ಸಿಬಿಐ ವರದಿ ಇದೆ. ಈಗ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿರುವುದರಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಆರ್.ಅಶೋಕ್ರವರು ಬೆಂಕಿ ಹಚ್ಚಿ ಬೀಡಿ ಹಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಒಣ ರಾಜಕಾರಣ ಬಿಟ್ಟುಬಿಡಿ ಎಂದು ಒತ್ತಾಯಿಸಿದರು.
ಯಾವುದೇ ಸ್ವಾಮೀಜಿಗಳಾದರೂ ಸಂವಿಧಾನ ಹಾಗೂ ಹಕ್ಕುಗಳ ಬಗ್ಗೆ ದಯವಿಟ್ಟು ಮಾತನಾಡಬೇಡಿ. ಜಾತಿಗಳ ವಿಚಾರದ ಚರ್ಚೆ ಬೇಡ ಎಂದು ಮನವಿ ಮಾಡುವುದಾಗಿ ಹೇಳಿದರು.
ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿದ್ದ ಹುಡುಗರ ಮೇಲೂ ಕೇಸು ಹಾಕಿಸಲಾಗಿದೆ. ಅಶೋಕ್ರವರು ಚಂದ್ರಶೇಖರ್ ಸ್ವಾಮೀಜಿ ಪ್ರಕರಣದಲ್ಲಿ ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.