ಕಾರಕಸ್,ಆ.9- ವೆನಿಜುವೆಲಾದಲ್ಲಿನ ವಿವಾದಿತ ಅಧ್ಯಕ್ಷೀಯ ಚುನಾವಣೆಯ ಕುರಿತು ಎಕ್ಸ್ ಮಾಲೀಕ ಎಲಾನ್ ಮಸ್ಕ್ ದ್ವೇಷ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ದೇಶದಲ್ಲಿ 10 ದಿನಗಳ ಕಾಲ ಎಕ್ಸ್ ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ಆ ರಾಷ್ಟ್ರದ ಅಧ್ಯಕ್ಷ ನಿಕೋಲಸ್ ಮಡುರೋ ತಿಳಿಸಿದ್ದಾರೆ.
ಗುರುವಾರ ರಾತ್ರಿ ಎರಡು ಖಾಸಗಿ ದೂರ ವಾಣಿ ಸೇವೆಗಳು ಮತ್ತು ಸರ್ಕಾರಿ ಸ್ವಾಮ್ಯದ ಮೊವಿಲ್‌ನೆಟ್‌ನ ಪೋಸ್ಟ್‌ಗಳ ಲೋಡಿಂಗ್ ಎಕ್ಸ್ ನಲ್ಲಿ ಸ್ಥಗಿತಗೊಂಡಿರುವುದು ಅಸೋಸಿಯೇಟೆಡ್ ಪ್ರೆಸ್‌ಸಂಸ್ಥೆಯ ವರದಿಗಾರರ ಗಮನಕ್ಕೆ ಬಂದಿತು.
ಎಲಾನ್ ಮಸ್ಕ್ ಅವರು ಎಕ್ಸ್ ನ ಮಾಲೀಕರಾಗಿದ್ದಾರೆ ಮತ್ತು ಸಾಮಾಜಿಕ ಜಾಲತಾಣದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಾರದ ಪರ ಸಂಘಟನೆಗಳ ಮೆರವಣಿಗೆಯ ಬಳಿಕ ಮಾಡಿದ ಭಾಷಣದಲ್ಲಿ ಮಡುರೋ ನುಡಿದರು.
ಮಸ್ಕ್ ಅವರು ದ್ವೇಷವನ್ನು ಭುಗಿಲೆಬ್ಬಿಸುತ್ತಿದ್ದಾರೆ ಎಂದು ಮಡುರೋ ಆರೋಪಿಸಿದರು. ತಮ ವಿರೋಧಿಗಳು ರಾಜಕೀಯ ಅಶಾಂತಿಯನ್ನುಂಟು ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಡುರೋ ಆಪಾದಿಸಿದರು.
ಎಕ್ಸ್ ಮಾಧ್ಯಮ ಕಚೇರಿ ಈ ನಿಟ್ಟಿನಲ್ಲಿ ತತ್‌ಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಎಕ್ಸ್ 10 ದಿನಗಳ ಕಾಲ ಔಟ್! ಎಲಾನ್ ಮಸ್ಕ್ ಔಟ್! ಎಂದು ಮಡುರೋ ಉದ್ಗರಿಸಿದ್ದಾರೆ.