Wednesday, December 4, 2024
Homeರಾಜಕೀಯ | Politicsಯತ್ನಾಳ್ ಉಚ್ಚಾಟನೆಗೆ ಹೆಚ್ಚಿದ ಒತ್ತಡ

ಯತ್ನಾಳ್ ಉಚ್ಚಾಟನೆಗೆ ಹೆಚ್ಚಿದ ಒತ್ತಡ

Pressure mounts for Yatnal's expulsion

ಬೆಂಗಳೂರು,ಡಿ.3- ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಾವುದೇ ಮುಲಾಜಿಲ್ಲದೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಬೇಕೆಂದು ಪಕ್ಷದ ಸಂಘಟನಾ ಪರ್ವ ಸಭೆಯಲ್ಲಿ ಒತ್ತಾಯಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ

ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಮೇಲನೆ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದ ಸಭೆಯಲ್ಲಿ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡುವಂತೆ ಒಕ್ಕೋರಲಿನಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಇದಕ್ಕೆ ದನಿಗೂಡಿಸಿದ 21ಕ್ಕೂ ಹೆಚ್ಚು ಜಿಲ್ಲಾಧ್ಯಕ್ಷರುಗಳು, ಶಾಸಕರು, ಮಾಜಿ ಶಾಸಕರು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಸೇರಿದಂತೆ ಮತ್ತಿತರರು ಕೂಡ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೆ ಮಾತ್ರ ಇತರರಿಗೂ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಯತ್ನಾಳ್ ಮತ್ತು ಅವರ ತಂಡ ನಿರಂತರವಾಗಿ ಅಡ್ಡಿ ಪಡಿಸುತ್ತಲೇ ಇದೆ. ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದವರು, ನಮ ಪಕ್ಷದವರನ್ನೇ ಟೀಕಿಸುತ್ತಾ, ವಿರೋಧ ಪಕ್ಷದವರಿಗೆ ಅಸ್ತ್ರ ನೀಡುತ್ತಿದ್ದಾರೆ. ಹೀಗಾಗಿ ಯಾವುದೇ ಕರುಣೆ ತೋರದೆ ಪಕ್ಷದಿಂದ ಕಿತ್ತು ಹಾಕಬೇಕೆಂದು ಬಹುತೇಕರು ಒತ್ತಾಯಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ.

ಯತ್ನಾಳ್ ಉಚ್ಚಾಟನೆ ಮಾಡಲೇಬೇಕೆಂದು ಪಟ್ಟು ಹಿಡಿದ ಪದಾಧಿಕಾರಿಗಳು ಯತ್ನಾಳ್ ಅವರನ್ನು ಉಚ್ಛಾಟಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಮುಂದಿನವರಿಗೆ ಎಚ್ಚರಿಕೆ ಪಾಠವಾಗುತ್ತದೆ ಎಂದು ಒತ್ತಾಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಯತ್ನಾಳ್ ಪಕ್ಷದ ಶಿಸ್ತು, ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಪಕ್ಷದ ನಾಯಕತ್ವ ವಿರುದ್ಧವೇ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಸಭೆಯಲ್ಲಿ ಯತ್ನಾಳ್ವಿರುದ್ಧ ವ್ಯಕ್ತವಾದ ಅಭಿಪ್ರಾಯಗಳನ್ನು ಆಲಿಸಿದ ತರುಣ್ ಚುಗ್, ನಿಮ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಇವತ್ತಿನ ಸಭೆಗಳು ಸಂಘಟನೆ ಪರ್ವ, ಸದಸ್ಯತ್ವ ಅಭಿಯಾನಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ವೇದಿಕೆಯಲ್ಲಿ ಚರ್ಚೆ ಬೇಡ ಎಂದು ಅವರು ಎಲ್ಲರನ್ನು ತಣ್ಣಗಾಗಿಸಿದರು.

RELATED ARTICLES

Latest News