Monday, October 6, 2025
Homeರಾಜ್ಯಹಿಂದೂ ಫೈರ್‌ ಬ್ರಾಂಡ್‌ ಯತ್ನಾಳ್‌ ಅವರನ್ನು ಪುನಃ ಬಿಜೆಪಿಗೆ ಕರೆತರುವಂತೆ ಹೆಚ್ಚಿದ ಒತ್ತಡ

ಹಿಂದೂ ಫೈರ್‌ ಬ್ರಾಂಡ್‌ ಯತ್ನಾಳ್‌ ಅವರನ್ನು ಪುನಃ ಬಿಜೆಪಿಗೆ ಕರೆತರುವಂತೆ ಹೆಚ್ಚಿದ ಒತ್ತಡ

Pressure to bring Hindu fire brand Yatnal back to BJP

ಬೆಂಗಳೂರು,ಅ.6- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿದ್ದ ಹಿಂದೂ ಫೈರ್‌ ಬ್ರಾಂಡ್‌ ಖ್ಯಾತಿಯ ಬಿಜಾಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪುನಃ ಬಿಜೆಪಿಗೆ ಕರೆತರಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಬಿಜೆಪಿಯೊಳಗಿರುವ ಒಂದು ಗುಂಪು ಕೇಂದ್ರ ವರಿಷ್ಠರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದು, ಯತ್ನಾಳ್‌ ಅವರನ್ನು ಪಕ್ಷಕ್ಕೆ ಕರೆತಂದರೆ ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಹಿಂದೂ ಮತಗಳ ಕ್ರೌಢೀಕರಣವಾಗಲಿದೆ. ಇದರಿಂದ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ ಎಂಬ ವಾದ ಸರಣಿಯನ್ನೇ ಮುಂದಿಟ್ಟಿದ್ದಾರೆ.

ಮಾರ್ಚ್‌ 25ರಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿತ್ತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳನ್ನು ಅತಿಯಾಗಿ ಟೀಕೆ ಮಾಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ನೊಟೀಸ್‌‍ ನೀಡಲಾಗಿತ್ತು. ಇದಾದ ನಂತರವು ಅವರ ಟೀಕೆ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಕ್ಷದಿಂದ ಗೇಟ್‌ಪಾಸ್‌‍ ನೀಡಲಾಗಿತ್ತು.

ಈ ಬೆಳವಣಿಗೆ ನಡೆದ ನಂತರ ಬಿಜೆಪಿ ಸಂಘಟನೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸುಧಾರಣೆಗಳು ಕಂಡುಬರುತ್ತಿಲ್ಲ. ಆರುಕ್ಕೂ ಏರಲಿಲ್ಲ. ಮೂರಕ್ಕೂ ಇಳಿಯಲಿಲ್ಲ ಎಂಬಂತೆ ಅದೇ ರಾಗ, ಅದೇ ಹಾಡಿನಲ್ಲಿ ಪ್ರತಿಪಕ್ಷವಾಗಿ ಮುಂದುವರೆಯುತ್ತಿದೆ.

ಒಂದು ಕಡೆ ಸರ್ಕಾರದ ವೈಫಲ್ಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ನಿರೀಕ್ಷಿತ ಮಟ್ಟದಲ್ಲೂ ಸಂಘಟನೆ ಬೆಳೆಯುತ್ತಿಲ್ಲ ಎಂಬ ಅಸಮಾಧಾನ ನಿಷ್ಠಾವಂತ ಕಾರ್ಯಕರ್ತರನ್ನು ಕಾಡುತ್ತಿದೆ.

ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಅಂತಹ ಅಪಸ್ವರಗಳು ಕೇಳಿಬರುತ್ತಿಲ್ಲವಾದರೂ ಬಿಜೆಪಿಯ ಮೂಲಶಕ್ತಿಯಾದ ಹಿಂದೂ ಮತಗಳನ್ನು ಸೆಳೆಯುವ ಸಾಮರ್ಥ್ಯ ಅವರಲ್ಲಿ ಇಲ್ಲ ಎಂಬುದೇ ಬಹುತೇಕರ ಕೊರಗು.

ಹೆಚ್ಚುತ್ತಿದೆ ಜನಪ್ರಿಯತೆ
ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಯತ್ನಾಳ್‌ ರಾಜಕೀಯ ಜೀವನ ಮುಗಿಯಿತು ಎಂದು ಬಹುತೇಕರು ಭಾವಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ರಾಜ್ಯಾದ್ಯಂತ ಅಭಿಮಾನಿಗಳಿಂದ ಹಿಂದೂ ಹುಲಿ ಎಂದೇ ಖ್ಯಾತಿಯಾಗಿರುವ ಯತ್ನಾಳ್‌ ಅಬ್ಬರ ಹೆಚ್ಚುತ್ತಿರುವುದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯ ಕೋಮಿನವರು ಕಲ್ಲು ಎಸೆದು ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಯತ್ನಾಳ್‌ ಭೇಟಿ ನೀಡಿದ ವೇಳೆ ಅವರಿಗೆ ಸಿಕ್ಕ ಭವ್ಯ ಸ್ವಾಗತ, ಜೈಕಾರ ನೋಡಿ ಮೂಲ ಬಿಜೆಪಿಯವರೇ ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಮದ್ದೂರು ಮಾತ್ರವಲ್ಲದೆ ಬೆಳಗಾವಿ, ದಾವಣಗೆರೆ, ರಾಯಚೂರು, ಕೊಪ್ಪಳ ಹೀಗೆ ರಾಜ್ಯದ ನಾನಾ ಕಡೆ ಗಣಪತಿ ವಿಸರ್ಜನೆ ವೇಳೆ ಯತ್ನಾಳ್‌ ತೆರೆಳಿದ್ದ ವೇಳೆ ಅವರ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದರು. ಯತ್ನಾಳ್‌ ಬರುತ್ತಿದ್ದಾರೆಂಬ ಸುದ್ದಿ ಕೇಳಿ ಹಿಂದೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಬಂದು ಜೈಕಾರ ಕೂಗುತ್ತಿದ್ದರು. ಹೀಗೆ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಮಂಕಾಗುತ್ತಿದೆ ಎಂಬ ಅಪಸ್ವರಗಳು ಕಾರ್ಯಕರ್ತರಿಂದ ಕೇಳಿಬರುತ್ತಿದೆ.

ಇನ್ನು ಬಿಜೆಪಿಯೊಳಗಿರುವ ಒಂದು ಗುಂಪು ಯತ್ನಾಳ್‌ ಅವರನ್ನು ಪುನಃ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಯಡಿಯೂರಪ್ಪ ಮತ್ತು ವಿಜೇಂದ್ರ ವಿರೋಧಿ ಬಣ ಕೇಂದ್ರ ವರಿಷ್ಠರನ್ನು ಭೇಟಿಯಾಗಿ ಲಾಭ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯತ್ನಾಳ್‌ ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ತಕರಾರು ಇಲ್ಲ. ಆದರೆ ಅವರು ಬಿಎಸ್‌‍ವೈ ಕುಟುಂಬವನ್ನು ಬಹಿರಂಗವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಠಮಾರಿ ಸ್ವಭಾವದ ಯತ್ನಾಳ್‌ ಅವರು ಈ ಷರತ್ತನ್ನು ಒಪ್ಪಿ ಮತ್ತೆ ಪಕ್ಷಕ್ಕೆ ವಾಪಸ್ಸಾಗಲಿದ್ದಾರೆಯೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ.

RELATED ARTICLES

Latest News