ಬೆಂಗಳೂರು,ಅ.18- ವಿಧಾನಸಭೆಯ ಉಪಚುನಾವಣೆಯ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಹಾಲಿನ ದರ, ಬಸ್ ಪ್ರಯಾಣ ದರ, ನೀರಿನ ದರಗಳ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ.
ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಪ್ರತಿ ಲೀಟರ್‌ಗೆ 5 ರೂ. ಹಾಲಿನ ದರ ಹೆಚ್ಚಿಸಬೇಕೆಂಬ ಪ್ರಸ್ತಾವನೆಯಿದೆ. ಅದರ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಈ ಮೊದಲು ರಾಮನಗರದಲ್ಲಿ ನಡೆದ ರೈತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದರು. ರೈತರ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಈಗ ರೈತರ ಅನುಕೂಲಕ್ಕಾಗಿ ಮತ್ತೊಮೆ ದರ ಹೆಚ್ಚಿಸಬೇಕೆಂಬ ಪ್ರಸ್ತಾವನೆ ಇದೆ ಎಂದರು.
ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 50 ಗ್ರಾಂ ಹೆಚ್ಚುವರಿ ಹಾಲನ್ನು ಸೇರ್ಪಡೆ ಮಾಡಿ 2 ರೂ. ದರ ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಹೆಚ್ಚುವರಿ ಹಾಲಿನ ಪ್ರಮಾಣ ನಾಪತ್ತೆಯಾಗಿದೆ. ಈಗ ನೇರವಾಗಿ ಹಾಲಿನ ದರವನ್ನೇ ಹೆಚ್ಚಿಸುವ ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ನಷ್ಟದಲ್ಲಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಚರ್ಚೆಗಳಾಗಿವೆ.
ಬಹುತೇಕ ಡಿಸೆಂಬರ್ ಅಂತ್ಯದೊಳಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜೊತೆಯಲ್ಲಿನ ಬೆಂಗಳೂರಿನ ಮೆಟ್ರೊ ಸಂಚಾರ ದರವನ್ನು ರಚಿಸಬೇಕೆಂಬ ಚರ್ಚೆಗಳಿವೆ. ಇದಕ್ಕಾಗಿ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಆಗಬೇಕು ಎಂಬುದು ಹಲವು ದಿನಗಳಿಂದಲೂ ಬಿಡ್ಬಬ್ಲ್ಯುಎಸ್‌ಎಸ್‌ಬಿ ಪ್ರಸ್ತಾವನೆ ಮಾಡುತ್ತಲೇ ಇದೆ. ಪ್ರಸ್ತುತ ಸಂಗ್ರಹವಾಗುತ್ತಿರುವ ನೀರಿನ ದರದಲ್ಲಿ ಶೇ.70ರಷ್ಟು ವಿದ್ಯುತ್ ಬಿಲ್ ಪಾವತಿಗೆ ಖರ್ಚಾಗುತ್ತಿದೆ.
ಉಳಿದ ಹಣದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ನಿಭಾಯಿಸುವುದು ಕಷ್ಟ ಎಂಬ ಮಾಹಿತಿ ಇದೆ. ಹೀಗಾಗಿ ಒಂದರ ಮೇಲೊಂದರಂತೆ ದರ ಏರಿಕೆಯು ಜನರನ್ನು ಕಾಡುವ ಸಾಧ್ಯತೆ ಇದೆ. ಉಪಚುನಾವಣೆಗೂ ಮುನ್ನವೇ ಬೆಲೆ ಏರಿಕೆಯಾಗಲಿದೆಯೇ ಅಥವಾ ಈ ಕುರಿತು ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.