ಬೆಂಗಳೂರು, ಅ.10– ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ನಗರದಲ್ಲಿ ಮನೆಮಾಡಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಜಯನಗರ, ವಿಜಯನಗರ, ಬಸವನಗುಡಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಹೂ, ಬಾಳೆಕಂದು, ಮಾವಿನ ಸೊಪ್ಪು, ಬೂದುಗುಂಬಳಕಾಯಿ ಖರೀದಿ ಜೋರಾಗಿತ್ತು.
ಕಳೆದ ಕೆಲವು ದಿನಗಳಿಂದ ಕುಸಿದಿದ್ದ ಹೂವಿನ ಬೆಲೆ ಹಬ್ಬದ ಹಿನ್ನೆಲೆಯಲ್ಲಿ ತುಸು ಏರಿಕೆಯಾಗಿದ್ದು, ಸೇವಂತಿಗೆ, ಕನಕಾಂಬರ, ಗುಲಾಬಿ, ಮಲ್ಲಿಗೆ ಹೂಗಳಿಗೆ ಹೆಚ್ಚಿನ ಬೇಡಿಕೆಯಿತ್ತು.ಕಚೇರಿ, ಮನೆ ಹಾಗೂ ವಾಹನಗಳಿಗೆ ಅಲಂಕರಿಸಲು ಹೂಗಳನ್ನು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಗುಣಮಟ್ಟದ ಹೂವಿಗೆ ತಕ್ಕಂತೆ ಬೆಲೆ ನಿಗಧಿ ಮಾಡಲಾಗಿತ್ತು.
ಮಲ್ಲಿಗೆ ಕೆಜಿಗೆ 800, ಕನಕಾಂಬರ 2000, ಗುಲಾಬಿ 350, ಸೇವಂತಿಗೆ 300, ಸುಗಂಧರಾಜ 350, ಚೆಂಡು ಹೂ 100 ರೂ.ಗೆ ಮಾರಾಟವಾಗುತ್ತಿದೆ.
ಬಾಳೆಕಂದು ಜೋಡಿಗೆ 50, ಮಾವಿನ ಸೊಪ್ಪು 1 ಕಟ್ 20, ನಿಂಬೆಹಣ್ಣು ಒಂದಕ್ಕೆ 7 ರೂ. ದ್ರಾಕ್ಷಿ 250, ಸೇಬು 120, ದಾಳಿಂಬೆ 200, ಏಲಕ್ಕಿ ಬಾಳೆಹಣ್ಣು 100, ಸೀತಾಫಲ 100 ರೂ.ಗೆ ಮಾರಾಟವಾಗುತ್ತಿದೆ.
ಇಂದು ಮುಂಜಾನೆ ನಗರದ ಕೆ.ಆರ್.ಮಾರುಕಟ್ಟೆಗೆ ಜನಜಂಗುಳಿಯೇ ಸೇರಿದ್ದು, ಖರೀದಿ ಭರಾಟೆ ಜೋರಾಗಿದ್ದು, ಕಚೇರಿ, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿ ಸಿಬ್ಬಂದಿಗಳಿಗೆ ಹಾಗೂ ನೌಕರರಿಗೆ ಶಾಸೊ್ತ್ರೕಕ್ತವಾಗಿ ಕಡಲೆಪುರಿ ನೀಡುವ ಸಂಪ್ರದಾಯ ನಗರದಲ್ಲಿದ್ದು, ಇದಕ್ಕಾಗಿ ಬಹುತೇಕ ರಸ್ತೆಗಳಲ್ಲಿ ಪುರಿ ಮೂಟೆಗಳು, ಸಿಹಿ ತಿನಿಸುಗಳ ವ್ಯಾಪಾರ ಕೂಡಾ ಜೋರಾಗಿತ್ತು.