ಬೆಳಗಾವಿ,ಡಿ.15- ನಾಳೆಯಿಂದ ವಿಧಾನಸಭೆಯ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಯಲಿದೆ.
ಮೊದಲ ದಿನ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಈಗಾಗಲೇ ಪ್ರಕಟಿಸಿದ್ದಾರೆ.
ಮಂಗಳವಾರ ಎಲ್ಲಾ ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಿದ್ದು ಬುಧವಾರ ವಿಶೇಷ ಚರ್ಚೆಯಲ್ಲಿ ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಉತ್ತರ ನೀಡಲಿದೆ.
ಈಗಾಗಲೇ ಮೇಲನೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಆರಂಭವಾಗಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಳೆಹಾನಿ ಕುರಿತ ಹೇಳಿಕೆ ಬಗ್ಗೆ ನಾಳೆ ಮತ್ತಷ್ಟು ಸ್ಪಷ್ಟೀಕರಣ ನೀಡಲಿದ್ದಾರೆ.
ಸರ್ಕಾರದ ಉತ್ತರ:
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದಬಾಣಂತಿಯರ ಸಾವಿನ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಲಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಈಗಾಗಲೇ ವಕ್ಫ್ ನೋಟಿಸ್ ನೀಡಿರುವ ವಿವಾದ ಕುರಿತ ಚರ್ಚೆ ವಿಧಾನಸಭೆಯಲ್ಲಿ ನಡೆದಿದ್ದು, ಅದಕ್ಕೂ ಸರ್ಕಾರ ನಾಳೆ ಉತ್ತರ ನೀಡಲಿದೆ. ಸರ್ಕಾರದ ಅಧಿಕೃತ ಕಾರ್ಯಕಲಾಪಗಳಾದ ಪ್ರಶ್ನೋತ್ತರ, ವಿತ್ತೀಯ ಕಲಾಪ, ಶಾಸನ ರಚನೆ ಸೇರಿದಂತೆ ಅಧಿಕೃತ ಕಾರ್ಯಕಲಾಪಗಳ ಜೊತೆಗೆ ಈ ವಿಶೇಷ ಚರ್ಚೆ ಹಾಗೂ ಉತ್ತರವೂ ಸದನದಲ್ಲಿ ಗಮನ ಸೆಳೆಯಲಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದಿದ್ದು, ಅಧಿವೇಶನ ಇನ್ನು 4 ದಿನಗಳು ಮಾತ್ರ ಉಳಿದಿದೆ. ಮೊದಲ ವಾರ ಪಂಚಮಸಾಲಿ ಮೀಸಲಾತಿ ಹೋರಾಟ, ಮಾಜಿ ಸೈನಿಕರು, ವಿಶೇಷ ಚೇತನರು, ಅತಿಥಿ ಶಿಕ್ಷಕರು ಸೇರಿದಂತೆ ಹಲವು ಸಂಘಸಂಸ್ಥೆಗಳು ತಮ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದವು.
ನಾಳೆಯಿಂದ ಮತ್ತೆ ಪ್ರತಿಭಟನೆಗಳು ನಡೆಯಲಿವೆ. ಪಂಚಮಸಾಲಿ ಮೀಸಲಾತಿ ಹೋರಾಟ ಇನ್ನು ತಣ್ಣಗಾಗಿಲ್ಲ. ಹಸಿರುಸೇನೆ, ರೈತ ಸಂಘದ ಸಂಘಟನೆಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಇದುವರೆಗೂ ನಡೆಸಿದ ಪ್ರತಿಭಟನೆಗಳ ಬಗ್ಗೆ ಸಮಾಧಾನಕರವಾಗುವ ರೀತಿಯಲ್ಲಿ ಸರ್ಕಾರದಿಂದ ಯಾವ ಭರವಸೆಯೂ ದೊರೆತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.