ಸೇತುವೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್, ಮೂವರು ಗಂಭೀರ,15 ಮಂದಿಗೆ ಗಾಯ

ತುಮಕೂರು, ಡಿ.28- ಹೊಸಕೆರೆ – ಹೊವಿನ ಕಟ್ಟೆ ಮಾರ್ಗದ ಗೂಬೆಕಲ್ಲು ಸಮೀಪವಿರುವ ಸೇತುವೆಗೆ ಅತಿವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತಲೆಕೆಳಗಾಗಿ ಬಿದ್ದ ಪರಿಣಾಮವಾಗಿ ಮೂವರು ಗಂಭೀರವಾಗಿ ಗಾಯಗೊಂಡು, 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಗಾಯಾಳುಗಳನ್ನು ತುಮಕೂರು, ಗುಬ್ಬಿ, ಹೊಸಕೆರೆ, ಚೇಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತುಮಕೂರಿನಿಂದ ಬೆಳ್ಳಾವಿ, ಚೇಳೂರು, ಹೊಸಕೆರೆ ಮಾರ್ಗವಾಗಿ ಯರಬಳ್ಳಿಗೆ ನಿಲ್ಲುತ್ತಿದ್ದ ಖಾಸಗಿ ಬಸ್ ನಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಚಾಲಕ ಅತಿವೇಗವಾಗಿ ಬಂದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾದ್ಯವಾಗದೆ ಸೇತುವೆಗೆ ಡಿಕ್ಕಿ ಹೊಡೆದ ರಭಸಕ್ಕೆ ತಲೆಕೆಳಗಾಗಿ ಬಿದ್ದ ಬಸ್ ಅಡಿಯಲ್ಲಿ ಕೆಲವರು ಸಿಕ್ಕಿಹಾಕಿಕೊಂಡು ಕೈ ಕಾಲು ಕಳೆದುಕೊಂಡವರೆ ಹೆಚ್ಚಾಗಿದ್ದಾರೆ.

ವಿಷಯ ತಿಳಿದ ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ವಿಜಯ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಗಂಭೀರವಾಗಿ ಗಾಯಗೊಂಡಿದ್ದ ಹೂವಿನಕಟ್ಟೆಯ ಅನಿತಾ(30), ಹೊಸಪಾಳ್ಯದ ರಮೇಶ್ ( 35) ಹಾಗೂ ಕುರಿಕಾಟನಹಳ್ಳಿಯ ನಿಂಗಣ್ಣ ( 60) ಎಂಬುವವರನ್ನು ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಅಪಘಾತ ಸಂಭವಿಸಿದ್ದ ಸಂದರ್ಭದಲ್ಲಿ ಬಸ್ ಕೆಳಗೆ ಸಿಕ್ಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೆಲವರನ್ನು ಪೊಲೀಸರ ಸಮಯ ಪ್ರಜ್ಞೆಯಿಂದ ಕೆಲವರ ಜೀವ ಉಳಿದಿದೆ.

ಸಾರ್ವಜನಿಕರು ಹಾಗೂ ಜೆಸಿಬಿ ಸಹಾಯದೊಂದಿಗೆ ಬಸ್ ಮೇಲಕ್ಕೆ ಎತ್ತಿ ಅಡಿಯಲ್ಲಿ ಸಿಲುಕಿದ್ದ ತ್ಯಾಗರಾಜ (30) , ಮುಬಾರಕ್,(25), ಕಿಶೋರ್ (27) ಎಂಬುವವರನ್ನು ರಕ್ಷಿಸಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಗಂಗಮ್ಮ, ಶಂಕರಮ್ಮ, ತಿಮ್ಮಯ್ಯ, ಹನುಮಂತಯ್ಯ, ನಾಗರಾಜ್, ಬಸವರಾಜು, ಜಯಮ್ಮ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಗುಬ್ಬಿ ವೃತ್ತ ನಿರೀಕ್ಷಕರಾದ ರಾಮಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.