ಬೆಂಗಳೂರು, ಮಾ.2- ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಕಾರಿನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಂಡ್ಲು ಮುಖ್ಯ ರಸ್ತೆಯಲ್ಲಿ ನಡೆದಿದೆ.ಮತ್ತೀಕರೆಯ ಗೋಕುಲ ಬಡಾವಣೆಯ ನಿವಾಸಿ ಅಶ್ವಿನ್ ಕುಮಾರ್ (42) ಮೃತ ವ್ಯಕ್ತಿ.
ಕಳೆದ ರಾತ್ರಿ ಮನೆಯಿಂದ ಕಾರಿನಲ್ಲಿ ಹೊರಟಿದ್ದ ಅಶ್ವಿನ್ ಕುಮಾರ್ ಅವರು ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೊಬೈಲ್ ನಂಬರ್ ಪಡೆದು ಟವರ್ ಲೊಕೇಶನ್ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಾಗ ಅಶ್ವಿನ್ ಕುಮಾರ್ ಅವರು ತಿಂಡ್ಲು ಮುಖ್ಯ ರಸ್ತೆಯ ಮೇಲೇತುವೆ ಬಳಿ ಇರುವುದು ಗೊತ್ತಾಗಿ ಸುಮಾರು 11.30 ರಲ್ಲಿ ಅಲ್ಲಿಗೆ ಹೋಗಿದ್ದಾರೆ.
ಕಾರಿನ ಚಾಲಕನ ಆಸನದಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದ ಅಶ್ವಿನ್ ಕುಮಾರ್ ಅವರನ್ನು ಕಾರಿನ ಗಾಜು ತಟ್ಟಿ ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಸ್ಪಂದನೆ ಸಿಗಲಿಲ್ಲ. ನಂತರ ಗಾಜು ಒಡೆದು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಕಾರು ಚಲಾಯಿಸುವಾಗ ಅವರು ಕಿಟಕಿ ಗಾಜುಗಳನ್ನು ಬಂದ್ ಮಾಡಿ ಎಸಿ ಆನ್ ಮಾಡಿರುವುದು ಗೊತ್ತಾಗಿದ್ದು, ತೈಲ ಖಾಲಿಯಾದ ಹಿನ್ನಲೆಯಲ್ಲಿ ಅದು ಸ್ತಬ್ದಗೊಂಡಿದೆ.ಸಾವಿನ ಕುರಿತಂತೆ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಇವರು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಅಥವಾ ಹೃದಯಾಘಾತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಶವ ಪರೀಕ್ಷೆ ನಂತರ ಸಾವಿನ ಕುರಿತು ನಿಖರ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸದ್ಯ ಕೊಡಿಗೇಹಳ್ಳಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.