Thursday, May 22, 2025
Homeರಾಜ್ಯಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

Priyank Kharge attacks central government

ಬೆಂಗಳೂರು,ಮೇ 22- ಕೇಂದ್ರ ಸರ್ಕಾರ ಹೇಳಿದಂತೆ ಕೇಳದಿದ್ದಾಗ, ಅವರ ಸಿದ್ದಾಂತಗಳನ್ನು ಒಪ್ಪದೇ ಇದ್ದಾಗ ಇ.ಡಿ. ಸೇರಿದಂತೆ ಅನೇಕ ದಾಳಿಗಳಾಗುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಗೃಹಸಚಿವ ಡಾ.ಜಿ. ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ. ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ 11 ವರ್ಷದಲ್ಲಿ 193 ಮಂದಿ ವಿರೋಧ ಪಕ್ಷದ ನಾಯಕರ ಮೇಲೆ ಇ.ಡಿ. ದಾಳಿಯಾಗಿದೆ. 2 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇದನ್ನು ರಾಜಕೀಯ ದುರುದ್ದೇಶ ಎನ್ನಬೇಕೇ ಅಥವಾ ಇ.ಡಿ.ಯ ಅಸಮರ್ಥತೆ ಎನ್ನಬೇಕೆ ಎಂದು ತಿಳಿಸಿದರು.

ಈ ಅಂಕಿ ಅಂಶಗಳನ್ನು ಕೇಂದ್ರ ಸಚಿವರೇ ಸಂಸತ್‌ನಲ್ಲಿ ನೀಡಿದ್ದಾರೆ. ಯಾವ ಪ್ರಕರಣವನ್ನೂ ಜಾರಿ ನಿರ್ದೇಶನಾಲಯ ತಾರ್ಕಿಕ ಹಂತಕ್ಕೆ ತೆಗೆದುಕೊಂಡುಹೋಗಿಲ್ಲ. ಸುಪ್ರೀಂಕೋರ್ಟ್‌ ಖುದ್ದಾಗಿ ಇ.ಡಿ.ಯನ್ನು ತರಾಟೆಗೆ ತೆಗೆದುಕೊಂಡು ನಿಮ ತನಿಖೆ ಹಾಗೂ ಪರಿಶೀಲನೆ ಆಯ್ದ ಮಾದರಿಯಲ್ಲಿ ನಡೆಯುತ್ತಿದೆ ಎಂದು ಚಾಟಿ ಬೀಸಿದೆ ಎಂದು ಆರೋಪಿಸಿದರು.

ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಯಿಂದ ರನ್ಯಾರಾವ್‌ ಅವರ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಯಾಗಿದೆ ಎಂಬ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ. ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಈ ಹಿಂದೆ ಮುಡಾ ಪ್ರಕರಣದಲ್ಲೂ ಇದೇ ರೀತಿಯ ಮಾಹಿತಿ ಸೋರಿಕೆ ಮಾಡಿ ಇ.ಡಿ. ಮುಜುಗರಕ್ಕೆ ಒಳಗಾಗಿತ್ತು. ಈಗ ಪರಮೇಶ್ವರ್‌ ಪ್ರಕರಣದಲ್ಲಿ ನೇರವಾಗಿ ಪತ್ರಿಕಾ ಹೇಳಿಕೆ ನೀಡದೇ ಮಾಹಿತಿ ಸೋರಿಕೆ ಮಾಡಿದ ನಂತರ ತನಿಖೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಒಂದು ವೇಳೆ ಆ ರೀತಿಯ ಬಿಲ್‌ ಪಾವತಿಯಾಗಿದ್ದರೂ ಕೂಡ ಅದು ಅಧಿಕೃತವಾದ ವಹಿವಾಟು. ಅದರಲ್ಲಿ ಕಾನೂನು ಬಾಹಿರ ಕೃತ್ಯ ಏನಿದೆ? ಕ್ರೆಡಿಟ್‌ ಕಾರ್ಡ್‌ ಬಿಲ್‌ ಅನ್ನು ನಗದುರೂಪದಲ್ಲಿ ಪಾವತಿಸಲಾಗುವುದಿಲ್ಲ. ಆನ್‌ಲೈನ್‌ ಪೇಮೆಂಟ್‌ ಮಾಡಿರಬೇಕು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪದೇಪದೇ ಚಿನ್ನ ಕಳ್ಳಸಾಗಾಣಿಕೆ ಪ್ರಕರಣವನ್ನು ಪ್ರಸ್ತಾಪಿಸಲಾಗು ತ್ತಿದೆ. ಕಸ್ಟಮ್ಸೌ ಕಾಯುವ ಕೆಲಸ ಪರಮೇಶ್ವರ್‌ ಅವರದಲ್ಲ. ರಾಜ್ಯ ಗೃಹ ಇಲಾಖೆಯದೂ ಅಲ್ಲ. ಕೇಂದ್ರ ಸರ್ಕಾರದ ಸಚಿವರು ಕೇಂದ್ರ ತನಿಖಾ ಸಂಸ್ಥೆಗಳು ಅಸಮರ್ಥವಾಗಿವೆ. ಅದನ್ನು ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸಿದರೆ ಹೇಗೆ. ಕೇಂದ್ರ ಗೃಹಸಚಿವ ಅಮಿತ್‌ ಷಾ ಅವರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಬೇಕು. ರಾಜ್ಯಸರ್ಕಾರವನ್ನಲ್ಲ ಎಂದು ತಿರುಗೇಟು ನೀಡಿದರು.

ವಿರೋಧಪಕ್ಷದ ನಾಯಕರ ಮೇಲೆ ದಾಳಿ ಮಾಡುವುದು, ತಪ್ಪು ಮಾಹಿತಿಗಳನ್ನು ಸೋರಿಕೆ ಮಾಡಿ ದಾಳಿ ಮಾಡುವುದು ಹೊಸದೇನಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಬಾರದು. ಅವರು ಹೇಳಿದಂತೆ ಕೇಳಬೇಕು. ಅವರ ತತ್ವ ಸಿದ್ದಾಂತವನ್ನು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಈ ರೀತಿಯ ದಾಳಿಗಳು ನಡೆಯುತ್ತವೆ ಎಂದು ವಾಗ್ದಾಳಿ ನಡೆಸಿದರು.

ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ವಿಧಾನಪರಿಷತ್‌ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮುತ್ತಿಗೆ ಹಾಕಿದ್ದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಅವರು ನಾಯಿ ಎಂದು ಕರೆದಿದ್ದಾರೆ. ಅಂತವರು ಚಿತ್ತಾಪುರಕ್ಕೆ ಬಂದರೆ ಪದಭೂಷಣ ಅಥವಾ ಭಾರತರತ್ನ ಕೊಡಬೇಕೇ?ರಾಜ್ಯೋತ್ಸವ ಪ್ರಶಸ್ತಿಗೆ ನನ್ನಿಂದ ಶಿಫಾರಸ್ಸು ಬೇಕೇ? ಅವರಿಗೆ ನಾಚಿಕೆ ಆಗುವುದಿಲ್ಲವೇ? ಎಂದು ತಿರುಗೇಟು ನೀಡಿದರು.ಬಿಜೆಪಿಯವರು ಮಾತನಾಡುವುದನ್ನು ನಿಲ್ಲಿಸಲಿ. ಜಾತಿನಿಂದನೆ ಮಾಡಿದ ಮುನಿರತ್ನ ಅವರನ್ನು ಪಕ್ಷದಲ್ಲಿಟ್ಟುಕೊಂಡು ಬಿಜೆಪಿಯವರಿಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಿಡಿಕಾರಿದರು.

RELATED ARTICLES

Latest News