ಬೆಂಗಳೂರು,ಅ.21- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ಮೂಲಕ ತುಂಬ ಬೇಕಾಗಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಮುಖ್ಯಸ್ಥರಿಗೆ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಭಾರತ ಸಂವಿಧಾನ ಅನುಚ್ಚೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಕುರಿತು ರಚಿಸಲಾಗಿರುವ ಉಪ ಸಮಿತಿ ವತಿಯಿಂದ ಸಚಿವರ ಗಮನ ಸೆಳೆಯಲಾಗಿದೆ. 2023ರ ಆಗಸ್ಟ್ 17ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸ್ಥಳೀಯ ವೃಂದದಲ್ಲಿ ಮೀಸಲಿರಿಸಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ
ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿಯಲ್ಲಿ ಇಲಾಖಾವಾರು ಭರ್ತಿ ಮಾಡಲು ಬಾಕಿ ಇರುವ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಹುದ್ದೆಗಳ ವಿವರಗಳನ್ನು ಪತ್ರದ ಜೊತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಮೂಲಕ 28,023 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಇವಗಳಲ್ಲಿ 12,945 ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಲೋಕಸೇವಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಉಳಿದಂತೆ 15,078 ಹುದ್ದೆಗಳು ಖಾಲಿ ಇದ್ದು ಭರ್ತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಇವುಗಳಲ್ಲಿ ಎ,ಬಿ,ಸಿ ಹಾಗೂ ಡಿ ವೃಂದದ ಹುದ್ದೆಗಳು ಸೇರಿವೆ ಎಂದು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 9,905 ವಿವಿಧ ಹುದ್ದೆಗಳನ್ನು ಬಡ್ತಿ ಮೂಲಕ ತುಂಬ ಬೇಕಿದ್ದು, ಈ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ಕ್ರಮ ಕೈಗೊಳ್ಳುವಂತೆಯೂ ಸಚಿವ ಪ್ರಿಯಾಂಕ್ ಖರ್ಗೆ
ಸಂಪುಟದ ಎಲ್ಲಾ ಸಚಿವರಿಗೂ ಬರೆದಿರುವ ಪತ್ರದಲ್ಲಿ ಕೋರಿದ್ದಾರಲ್ಲದೆ, ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಬೇಕೆಂದೂ ತಿಳಿಸಿದ್ದಾರೆ.