Thursday, October 16, 2025
Homeರಾಜ್ಯಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಲು ಸಿಎಂಗೆ ಪ್ರಿಯಾಂಕ ಖರ್ಗೆ ಮತ್ತೊಂದು ಪತ್ರ

ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ನಿಷೇಧಿಸಲು ಸಿಎಂಗೆ ಪ್ರಿಯಾಂಕ ಖರ್ಗೆ ಮತ್ತೊಂದು ಪತ್ರ

Priyanka Kharge writes another letter to CM seeking ban on government employees from participating in activities of associations and organizations

ಬೆಂಗಳೂರು, ಅ.16- ಶಾಲಾ ಕಾಲೇಜು, ಪಾರ್ಕ್‌ ಸೇರಿದಂತೆ ಸರ್ಕಾರಿ ಸ್ವತ್ತುಗಳಲ್ಲಿ ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಪತ್ರ ಬರೆದು, ವಿವಾದ ಸೃಷ್ಟಿಸಿರುವ ಸಚಿವ ಪ್ರಿಯಾಂಕ ಖರ್ಗೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ನೌಕರರು ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಕಟ್ಟು ನಿಟ್ಟಿನ ನಿಷೇಧ ಜಾರಿಗೊಳಿಸಲು ಮತ್ತೊಂದು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಪ್ರಿಯಾಂಕ ಖರ್ಗೆ, ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರುಗಳಿಗೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು, 2021 ಅಡಿ ನಿಯಮ 5(1) ಪ್ರಕಾರ ಜಾರಿಯಲ್ಲಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಬೇಕು ಎಂದಿದ್ದಾರೆ.

ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.

ಆದರು ಸಹ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪ್ರಿಯಾಂಕ ಖರ್ಗೆ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರಿ ಸ್ವತ್ತುಗಳಲ್ಲಿ ಸಂಘ ಪರಿವಾರದ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದಿದ್ದ ಪ್ರಿಯಾಂಕ ಖರ್ಗೆ ಅವರ ವಿರುದ್ಧ ನಾನಾ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಕೆಲವು ದುಷ್ಕರ್ಮಿಗಳು ನಿರಂತರವಾಗಿ ಕರೆ ಮಾಡಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಖುದ್ದು ಸಚಿವರು ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ವಿರುದ್ದ ಬಾರಿ ಪ್ರಮಾಣದ ಟೀಕೆಗಳೇ ಕೇಳಿ ಬರುತ್ತಲೇ ಇವೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲೂ ತಾವು ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳುತ್ತಲೇ ಸಚಿವರು ಮತ್ತೊಂದು ಪತ್ರ ಬರೆಯುವ ಮೂಲಕ ಸಂಘ ಪರಿವಾರದ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

RELATED ARTICLES

Latest News