ಬೆಂಗಳೂರು,ಮಾ.18- ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಗೂಂಡಾ ರಾಜ್ಯದ ಅಪರಾವತಾರ ಆಗಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ವಿಧಾನಸಭೆಯಲ್ಲಿ ಆರೋಪಿಸಿದರು. ಕಾನೂನು ಸುವ್ಯವಸ್ಥೆ ಕುರಿತು ನಿಲುವಳಿ ಸೂಚನೆಯನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಿಯಮ 69ಕ್ಕೆ ಮಾರ್ಪಾಡು ಮಾಡಿ ಅವಕಾಶ ಮಾಡಿಕೊಟ್ಟಾಗ ವಿಷಯ ಪ್ರಸ್ತಾಪಿಸಿದ ಅಶೋಕ್ ಅವರು ರಾಜ್ಯದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಲಂಗುಲಗಾಮಿಲ್ಲ. ಬಿಡದಿ ಬಳಿಯ ಟೊಯೋಟಾ ಕಂಪನಿಯ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಕಿಡಿಗೇಡಿಗಳು ಬರೆದಿದ್ದಾರೆ. ಅಲ್ಲದೆ ಶೌಚಾಲಯದಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಸಿ ಬರೆದಿದ್ದಾರೆ. ಇದು ನಾವೆಲ್ಲರೂ ತಲೆತಗ್ಗಿಸುವಂಥ ವಿಚಾರ ಎಂದು ಹೇಳಿದರು.
ರಾಜ್ಯಸರ್ಕಾರಕ್ಕೂ ಕಾನೂನು ಮತ್ತು ಸುವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ತಾಳಮೇಳ ಇಲ್ಲದಂತಾಗಿದೆ. ಗೃಹ ಇಲಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಣೆ ಮಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಮನಗರದ ಬಿಡದಿ ಬಳಿಯ ಟೊಯೋಟಾ ಕಂಪನಿಯ ಐದಾರು ಗೋಡೆಗಳ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆಯಲಾಗಿದೆ. ಅಲ್ಲದೆ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಸಿ ಬರೆಯಲಾಗಿದೆ. ಈ ವಿಚಾರದ ಬಗ್ಗೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲ ಕಿಡಿಗೇಡಿಗಳು ಈ ರೀತಿ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿಸಿ ಟಿವಿ ಪರಿಶೀಲನೆ ಮಾಡಿ ಸೆಕೆಂಡ್‌ನಲ್ಲಿ ಕಿಡಿಗೇಡಿಗಳನ್ನು ಸೆರೆ ಹಿಡಿಯಬಹುದಾಗಿತ್ತು. ಆದರೂ ಸರ್ಕಾರ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹೋರಿ ಹಬ್ಬದಲ್ಲಿ ಉಂಟಾದ ಸ್ನೇಹ ಲವ್ ಜಿಹಾದ್‌ನಲ್ಲಿ ಅಂತ್ಯವಾಗಿದೆ. ಸ್ವಾತಿ ಎಂಬ ನರ್ಸ್ ಹೋರಿ ಓಡಿಸುವ ಜಾತ್ರೆಗಳಿಗೆ ಹೋಗುವ ಅಭ್ಯಾಸ ಹೊಂದಿದ್ದರು. ಮಾರ್ಚ್ 6 ರಂದು ರಾಣೆಬೆನ್ನೂರಿಗೆ ಹೋಗಿದ್ದಾರೆ. 7 ರಂದು ಅವರ ತಾಯಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆಕೆಗೆ ನಯಾಜ್ ಎಂಬ ವ್ಯಕ್ತಿ ಪರಿಚಯವಾಗಿ ಪ್ರೀತಿ ಅಂಕುರವಾಗಿರುತ್ತದೆ. ಸ್ಥಳೀಯರಾದ ವಿನಯ್, ದುರ್ಗಾಚಾರಿ ಎಂಬುವರು ಕೂಡ ಅದಕ್ಕೆ ಸಹಕಾರ ನೀಡಿರುತ್ತಾರೆ ಎಂದರು.
ಸ್ವಾತಿ ಎಂಬಾಕೆಯನ್ನು ಇವರು ಪುಸಲಾಯಿಸಿ ಒಂದು ಸ್ಥಳಕ್ಕೆ ಬರಲು ಹೇಳಿ ಬೊಲೋರೊ ಕಾರಿನಲ್ಲಿ ಕರೆದೊಯ್ದು ಪಾಳು ಬಿದ್ದ ಶಾಲೆಯಲ್ಲಿ ಆಕೆಯ ಕುತ್ತಿಗೆಗೆ ಕೇಸರಿ ಟವಲ್‌ನಲ್ಲಿ ಗೀರಿ ಸಾಯಿಸಿದ್ದಾರೆ. ನಂತರ ತುಂಗಾ ನದಿಗೆ ಆಕೆಯನ್ನು ಬಿಸಾಕಿದ್ದಾರೆ. ಮೂರು ದಿನದ ನಂತರ ಆಕೆಯ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ತಿಳಿದುಬಂದಿದೆ. ಆದರೆ ಪೊಲೀಸರು ಆಕೆಯ ತಾಯಿಗೆ ವಿಷಯ ತಿಳಿಸದೆ ದೇಹವನ್ನು ಸುಟ್ಟುಹಾಕಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ.
ನೇಹ ಎಂಬಾಕೆಯ ಹತ್ಯೆಯಾದಾಗ ಪೊಲೀಸರು ಎಚ್ಚರಿಕೆ ವಹಿಸಿ ಗಂಭೀರ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಹೇಳಿದರು.ಹಂಪಿ ಬಳಿಯ ಗಂಗಾವತಿ ತಾಲ್ಲೂಕಿನ ಸಣ್ಣಾಪುರ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಹೋಂ ಸ್ಟೇ ಮಾಲೀಕರು ಹಾಗೂ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಮಲ್ಲೇಶ್, ಚೇತನ್‌ಸಾಯಿ, ಸಿಳ್ಳೇಕ್ಯಾತ ಎಂಬುವರು ಒಡಿಶಾ ಮೂಲದ ಬಿಪಾಶ್ ಎಂಬುವರನ್ನು ನದಿಗೆ ಎಸೆದಿದ್ದಾರೆ. ಇಬ್ಬರು ನದಿಯಿಂದ ಈಜಿ ದಡ ಸೇರಿದ್ದಾರೆ. ಹೋಂ ಸ್ಟೇ ಮಾಲೀಕರು ಹಾಗೂ ವಿದೇಶಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುನೀಲ್‌ಕುಮಾರ್ ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರದ ಯೋಜನೆಗಳನ್ನು ವಿದೇಶೀಯರು ಮೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದ್ದರು. ಆದರೆ ವಿದೇಶಿಯರ ಹಲ್ಲೆ, ದೌರ್ಜನ್ಯ, ಹತ್ಯೆ, ಅತ್ಯಾಚಾರವಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವಾದರೆ ಯಾರಿಗೆ ಕೇಳಬೇಕು. ಆಡಳಿತ ಪಕ್ಷಕ್ಕೆ ಸದನದ ಗಂಭೀರತೆ ಇಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಾರ್ಯಸೂಚಿಯಂತೆ ಸರ್ಕಾರಿ ಕಲಾಪಗಳು ನಡೆಯಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಮತ್ತೆ ಮಾತು ಮುಂದುವರೆಸಿದ ಅಶೋಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಹಂಪಿಯಲ್ಲೇ ಹೀಗಾದರೆ ಹೇಗೆ?, ಶೇ. 60 ರಷ್ಟು ಇಸ್ರೇಲ್ ಪ್ರವಾಸಿಗರು ಬರುತ್ತಾರೆ. ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರವಾದ ನಂತರ ಪ್ರವಾಸಿಗರು ಹೋಂ ಸ್ಟೇಗಳನ್ನು ಖಾಲಿ ಮಾಡುತ್ತಿದ್ದಾರೆ. ಹಂಪಿಗೆ ಕೆಟ್ಟ ಹೆಸರು ಬಂದಿದೆ. ಈಗ ಸರ್ಕಾರ ಹೋಂ ಸ್ಟೇಗಳಿಗೆ ಸಂಖ್ಯೆ ಕೊಡುವುದಾಗಿ ಹೇಳಿದೆ. ಕಾನೂನು ಸುವ್ಯವಸ್ಥೆ ಈ ರೀತಿ ಹದಗೆಟ್ಟಿದ್ದರೂ ಮುಖ್ಯಮಂತ್ರಿ ಸದನದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಶ್ವ ಸಂಸ್ಥೆಯ ಅಧ್ಯಕ್ಷರು ಗ್ಯಾರಂಟಿ ಯೋಜನೆಗಳನ್ನು ಹೊಗಳಲು ಬೆಂಗಳೂರಿಗೆ ಬಂದಿರಲಿಲ್ಲ. ದೆಹಲಿಗೆ ಬಂದಿದ್ದ ಅವರು ಸಿಲಿಕಾನ್ ವ್ಯಾಲಿ ಬೆಂಗಳೂರಿನ ಚೈತನ್ಯ ಅನುಭವಿಸಲು ತಂತ್ರಜ್ಞಾನವನ್ನು ನೋಡಲು ಬಂದಿದ್ದರು. ಆದರೆ ಮುಖ್ಯಮಂತ್ರಿಯವರು ಗ್ಯಾರಂಟಿ ಹೊಗಳಲು ಬಂದಿದ್ದರು ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರದ ಮಾನ ಹೋಗುತ್ತಿದೆ. ಆದರೂ ಸರ್ಕಾರ ಮೌನವಾಗಿದೆ. ಚಿನ್ನಕಳ್ಳಸಾಗಾಣಿಕೆ ವಿಚಾರದಲ್ಲಿ ಮಂತ್ರಿಗಳ ಹೆಸರು ಬಂದಿದ್ದರೂ ಚಕಾರ ಎತ್ತುತ್ತಿಲ್ಲ.
ಈ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು. ಕನ್ನಡಿಗರಿಗೆ ಅಪಮಾನ ಮಾಡಿದ, ಪಾಕಿಸ್ತಾನದ ಪರವಾಗಿ ಬರಹ ಬರೆದಿರುವ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇದೊಂದು ತಲೆ ತಗ್ಗಿಸುವಂಥ ಘಟನೆ. ಇನ್ನೂ ಯಾರನ್ನೂ ಬಂಧಿಸಿಲ್ಲ. ಇಂತಹ ಸರ್ಕಾರ ಯಾವಾಗ ತೊಲಗುತ್ತದೋ ಎಂಬ ಭಾವನೆ ಜನರಲ್ಲಿದೆ ಎಂದು ಅವರು ಹೇಳಿದರು.