ಬೆಂಗಳೂರು, ಫೆ.18- ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಸಮಸ್ಯೆ ಇದೇ ತಿಂಗಳ 20ರೊಳಗೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಾಳೆ ಎಲ್ಲಾ ಮಾಹಿತಿಯನ್ನು ನೀಡಲಿದ್ದೇನೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.20ರೊಳಗೆ ಎಲ್ಲ ಸರಿಯಾಗಲಿದೆ ಎಂಬ ಸ್ಪಷ್ಟನೆ ನೀಡಿ, ಎಲ್ಲ ಪ್ರಶ್ನೆಗಳಿಗೂ ನಾಳೆಯೇ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ರಾಜಕೀಯ ವಿಚಾರವಾಗಿಯೂ ನಾಳೆಯೇ ಮಾತನಾಡುತ್ತೇನೆ. ಅನ್ನಭಾಗ್ಯ ಹಣ, ಗೃಹ ಲಕ್ಷ್ಮಿ ನಿಧಿ ವಿಳಂಬ ವಿಚಾರ ನಾಳೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ.
ಕಾಂಗ್ರೆಸ್‌ನ ಗ್ಯಾರಂಟಿ, ರಾಜಕೀಯ ಬೆಳವಣಿಗಳ ಬಗ್ಗೆ ಮಾಹಿತಿ ನೀಡಲಿದ್ದೇನೆ ಎಂದು ಹೇಳಿದರು. ಫೆ.20ರಂದು ಯತ್ನಾಳ್ ತಂಡದಿಂದ ಮತ್ತೆ ಸಭೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯರಿದ್ದಾರೆ. ಸಭೆ ಕರೆದು ಪಕ್ಷ ಬಲಪಡಿಸುವ ಬಗ್ಗೆ ಚರ್ಚೆ ಮಾಡುತ್ತಾರೆ. ಅದಕ್ಕೆ ನಾನು ಯಾಕೆ ಬೇಡ ಎನ್ನಲಿ ಎಂದು ಪ್ರಶ್ನಿಸಿದರು. ಭಿನ್ನಮತೀಯರ ಸಭೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾರೇನೇ ಮಾಡಿದರೂ ಪಕ್ಷಕ್ಕೆ ಪೂರಕವಾಗಿ ಮಾಡುತ್ತಾರೆ ಎಂಬುದು ನನ್ನ ಅಭಿಲಾಷೆ ಎಂದು ಹೇಳಿದರು.